ಮೂಡಲಗಿ:ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಪಟ್ಟಣದಲ್ಲಿ ಭುಗಿಲೆದ್ದ ಆಕ್ರೋಶ , ಬೀದಿಗಿಳಿದ ನಾಗರೀಕರು
ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಪಟ್ಟಣದಲ್ಲಿ ಭುಗಿಲೆದ್ದ ಆಕ್ರೋಶ , ಬೀದಿಗಿಳಿದ ನಾಗರೀಕರು
ಮೂಡಲಗಿ ಸೆ 8: ಗೋಕಾಕ ತಾಲೂಕಿನ ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಿ ಅಧಿಕೃತವಾಗಿ ಘೋಷಣೆ ಮಾಡಿದ್ದರು ಏಕಾಏಕಿ ಸರ್ಕಾರ ಮೂಡಲಗಿ ತಾಲೂಕು ರಚನೆ ಕೈಬಿಟ್ಟಿರುವುದರಿಂದ ಆಕ್ರೋಶಗೊಂಡ ನಾಗರೀಕರು ಶುಕ್ರವಾರ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಮೂಡಲಗಿ ಪಟ್ಟಣದಲ್ಲಿ ತೇಶ್ವಮಯ ವಾತಾವರಣ ನಿರ್ಮಾಣಗೊಂಡಿದೆ.
ರಾಜ್ಯ ಸರ್ಕಾರ ಮೂಡಲಗಿ ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿ ರಚಿಸಿದ್ದು, ಗೆಜೆಟ್ ಕೂಡ ಹೊರಡಿಸಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಹೊಸ ತಾಲೂಕುಗಳ ರಚನೆ ಪಟ್ಟಿಯಲ್ಲಿ ಮೂಡಲಗಿಯನ್ನು ಕೈ ಬಿಟ್ಟಿದ್ದರಿಂದ ನಿಯೋಜಿತ ಮೂಡಲಗಿ ತಾಲೂಕಾ ಚಾಲನಾ ಸಮಿತಿ ಮತ್ತು ವಿವಿಧ ಸಂಘಟನಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಬುಗಿಲೆದ್ದ ಆಕ್ರೋಶ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಂದ ಟೈರ್ ಗಳಿಗೆ ಬೆಂಕಿ ಹಚ್ಚಿ ಉಗ್ರ ಹೋರಾಟ ನಡೆದಿದ್ದು, ಪಟ್ಟಣದ ಎಲ್ಲ ಅಂಗಡಿ ಮುಗ್ಗಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಇನ್ನೂ ಹೆಚ್ಚಿನ ಹಿಂಸಾಚಾರ ನಡೆಯುವ ಎಲ್ಲ ಸಾಧ್ಯತೆಗಳು ಗೋಚರಗೊಂಡಿವೆ.
ಪ್ರಸಕ್ತ ವರ್ಷದ ಬಜೆಟ್ ನಲ್ಲಿ ತಾಲುಕಾ ರಚನೆ ಪಟ್ಟಿಯಲ್ಲಿ ಮೂಡಲಗಿ ಹೆಸರು ಇತ್ತು. ಹಾಗಿದ್ದರು ಸರ್ಕಾರದ ಅಂತಿಮ ಅಧಿಸೂಚನೆಯಲ್ಲಿ ದಿಢೀರಣೆ ಮೂಡಲಗಿಯನ್ನು ಕೈ ಬಿಟ್ಟಿರುವುದಕ್ಕೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಗೋಕಾಕ ತಾಲೂಕಿನಲ್ಲಿ ಅತ್ಯಂತ ದೊಡ್ಡ ಪಟ್ಟಣವಾಗಿರುವ ಮೂಡಲಗಿಯನ್ನು ತಾಲೂಕು ಕೇಂದ್ರವಾಗಿ ರಚಿಸಲು ಸರ್ಕಾರವೇ ನೇಮಕ ಮಾಡಿದ ಹುಂಡೆಕರ್, ವಾಸುದೇವ ಮತ್ತು ಗದ್ದಿಗೌಡರ್ ವರದಿಗಳು ಶಿಪ್ಪಾರಸ್ಸು ಮಾಡಿದ್ದವು. ಇದನ್ನೇ ಆಧರಿಸಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂಡಲಗಿಯನ್ನು ಹೊಸ ತಾಲೂಕುವನ್ನಾಗಿ ಘೋಷಿಸಿ ಗೆಜೆಟ್ ಕೂಡ ಹೊರಡಿಸಿದ್ದರು.
ಮೂಡಲಗಿ ತಾಲೂಕು ರಚನೆಯ ಅಧಿಸೂಚನೆ ಸರ್ಕಾರ ಕೈ ಬಿಟ್ಟಿರುವ ಹಿನ್ನಲೆಯಲ್ಲಿ ಪಟ್ಟಣದ ಜನತೆ ಆಕ್ರೋಶಕ್ಕೆ ಚುನಾಯಿತ ಪ್ರತಿನಿಧಿಗಳು ತುತ್ತಾಗಿದ್ದು, ಇದರ ಹೊಣೆಯನ್ನು ಕೂಡ ಅವರ ಮೇಲೆ ಹಾಕಿದ್ದಾರೆ. ಒಂದು ವೇಳೆ ಮೂಡಲಗಿ ಪಟ್ಟಣದ ಜನರಿಗೆ ನ್ಯಾಯ ಸಿಗದಿದ್ದರೆಟನ ಮೂಡಲಗಿ ಪಟ್ಟಣದಲ್ಲಿ ಉಗ್ರ ಸ್ವರೂಪದ ಹೋರಾಟಕ್ಕೆ ಸಾರ್ವಜನಿಕರು ಸಿದ್ದರಾಗಿ ನಿಂತಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗೃತವಾಗಿ ವ್ಯಾಪಕವಾಗಿ ಪೊಲೀಸ್ ಬಂದೋಬಸ್ತ್ ನೀಯೋಜನೆ ಮಾಡಲಾಗಿದ್ದು, ತಾಲೂಕಾ ರಚನೆ ಅಧಿಸೂಚನೆಯಲ್ಲಿ ಮೂಡಲಗಿಯನ್ನು ಕೈ ಬಿಟ್ಟಿರುವ ಸರ್ಕಾರದ ಕ್ರಮದ ಬಗ್ಗೆ ಇಂದು ಸಂಜೆ 4 ಗಂಟೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿಗೆ ತೆರಳಿ ನಿಯೋಜಿತ ಮೂಡಲಗಿ ತಾಲೂಕಾ ಚಾಲನಾ ಸಮಿತಿ ಮತ್ತು ನಾಗರಿಕರ ಜೊತೆ ಚರ್ಚಿಸಿಲಿದ್ದಾರೆ ಎಂದು ತಿಳಿದು ಬಂದಿದೆ