ಗೋಕಾಕ:ದೇವಸ್ಥಾನದ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿರುವ ಸಿಎಂ ಜಗನಮೋಹನ ರೆಡ್ಡಿ ನಡೆ ಖಂಡನೀಯ : ಪ್ರಮೋದ ಮುತಾಲಿಕ
ದೇವಸ್ಥಾನದ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿರುವ ಸಿಎಂ ಜಗನಮೋಹನ ರೆಡ್ಡಿ ನಡೆ ಖಂಡನೀಯ : ಪ್ರಮೋದ ಮುತಾಲಿಕ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 25 :
ಜಗತ್ತಿನಲ್ಲೆ ಅತ್ಯಂತ ಶ್ರೀಮಂತವಾದ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನಮೋಹನ ರೆಡ್ಡಿ ನಡೆಯನ್ನು ಖಂಡಿಸುವದಾಗಿ ಶ್ರೀ ರಾಮ ಸೇನೆ ಕರ್ನಾಟಕದ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ಅವರು, ನಗರದ ನಾಕಾ ನಂ-1ರಲ್ಲಿರುವ ಗೋ ರಕ್ಷಕ ಶಿವಕುಮಾರ್ ಉಪ್ಪಾರ ಅವರ ಮನೆಯಲ್ಲಿ ಶಿವಕುಮಾರ್ ಉಪ್ಪಾರ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಿವಕುಮಾರ್ ಉಪ್ಪಾರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಮುಖ್ಯಮಂತ್ರಿ ಜಗನ್‍ಮೋಹನ ರೆಡ್ಡಿ ತಂದೆಯೂ ಸಹ ಈ ಹಿಂದೆ ದೇವಸ್ಥಾನದ ಆಸ್ತಿಯನ್ನು ಮಾರಾಟ ಮಾಡಲು ಹೋಗಿ ದೇವರ ಶಾಪದಿಂದ ಸಾವನ್ನಪ್ಪಿದ್ದರು. ಜಗನಮೋಹನ ಸಹ ದೇವಸ್ಥಾನದ ಪಾವಿತ್ರ್ಯತೆ ಹಾಳು ಮಾಡಲು ಯತ್ನಿಸುತ್ತಿರುವದಲ್ಲದೇ ದೇವರ ಶಾಪಕ್ಕೆ ಗುರಿಯಾಗುತ್ತಿದ್ದಾರೆ. ಜನರು ಒಂದೊಂದು ರೂಪಾಯಿಯನ್ನು ಕೂಡಿ ಹಾಕಿ ತಿರುಪತಿ ದೇವಸ್ಥಾನಕ್ಕೆ ದರ್ಶನ ಪಡೆದು ದೇವರ ಹೂಂಡಿಗೆ ಕಾಣಿಕೆ ಅರ್ಪಿಸುತ್ತಾರೆ. ಇದರಿಂದ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆ ಹೊಂದಿದ್ದು, ಜಗನಮೋಹನ ರೆಡ್ಡಿ ಯವರಿಗೆ ದೇವಸ್ಥಾನದ ಆಸ್ತಿ ಮಾರಾಟ ಮಾಡಲು ಹಕ್ಕು ಕೊಟ್ಟಿದ್ದು ಎಂದು ಪ್ರಶ್ನಿಸಿದ ಅವರು ಜಗನಮೋಹನ ರೆಡ್ಡಿ ನಡೆಯ ವಿರುದ್ಧ ಇದೆ.27 ರಂದು ಕರ್ನಾಟಕ ರಾಜ್ಯಾಧ್ಯಂತ ಉಗ್ರಹೋರಾಟ ಮಾಡುವದಾಗಿ ತಿಳಿಸಿದರು.
ಕಳೆದ ಒಂದು ವರ್ಷಗಳ ಹಿಂದೆ ಹಿಂದೂಪರ ಸಂಘಟನೆಯ ಕಾರ್ಯಕರ್ತ ಹಾಗೂ ಗೋ ರಕ್ಷಕ ಶಿವಕುಮಾರ್ ಉಪ್ಪಾರ ಅವರ ಸಾವನ್ನು ಪೋಲಿಸ್ ಇಲಾಖೆ ಆತ್ಮಹತ್ಯೆ ಎಂದು ಮುಚ್ಚಿಹಾಕಿದೆ. ಆದರೆ ಶ್ರೀ ರಾಮ ಸೇನೆ ಇದನ್ನು ಕೊಲೆ ಎಂದು ಸಾರಿ ಸಾರಿ ಹೇಳುತ್ತಲಿದೆ. ಗೋರಕ್ಷಕ ಶಿವಕುಮಾರ ಸಾವಿಗೆ ಶಾಂತಿ ನೀಡಲು ಕೊಲೆಗಡುಕರಿಗೆ ಶಿಕ್ಷೆಯಾಗಬೇಕು. ಮತ್ತು ಕೃಷಿಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿಗೆ ಸಹಾಯಕವಾಗಿರುವ ಗೋವನ್ನು ರಾಷ್ಟ್ರಪ್ರಾಣಿಯನ್ನಾಗಿ ಸರಕಾರ ಘೋಷಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ನಾಯಿಕ, ಭಜರಂಗದಳ ಮುಖಂಡ ಸದಾಶಿವ ಗುದಗಗೋಳ, ಶ್ರೀರಾಮ ಸೇನೆಯ ಮುಖಂಡರಾದ ವಿವೇಕ ಪುರಾಣಿಕ, ರವಿ ಪೂಜಾರಿ, ಗೋ ರಕ್ಷಕ ಶಿವಕುಮಾರ್ ಉಪ್ಪಾರ ಅವರ ತಂದೆ ತಾಯಿ ಸೇರಿದಂತೆ ಶ್ರೀರಾಮ ಸೇನೆಯ ಕಾರ್ಯಕರ್ತರು ಇದ್ದರು.