ಬೆಟಗೇರಿ:ಎಲ್ಲರೂ ಮನೆಯಲ್ಲಿರೋಣ, ಕರೊನಾ ಗೆಲ್ಲೂನಾ : ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಬಳಿಗಾರ
ಎಲ್ಲರೂ ಮನೆಯಲ್ಲಿರೋಣ, ಕರೊನಾ ಗೆಲ್ಲೂನಾ : ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಬಳಿಗಾರ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಎ 4 :
ದೇಶಾದ್ಯಂತ ಹರಡಿರುವ ಕರೋನಾ ಮಹಾಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕುಲಗೋಡ ಪೊಲೀಸ್ ಠಾಣೆ ಅವರ ಸಹಕಾರದ ಸಹಯೋಗದಲ್ಲಿ ಶನಿವಾರ ಏ.4ರಿಂದ ಬುಧವಾರ ಏ.8ರವರೆಗೆ ನಾಲ್ಕು ದಿನಗಳ ಕಾಲ ಬೆಟಗೇರಿ ಗ್ರಾಮಕ್ಕೆ ವಿಶೇಷವಾಗಿ ದಿಗ್ಬಂದನ್ ಹಾಕಿ ಸಂಪೂರ್ಣ ಬಂದ್ ಮಾಡಿದ ಸಂಗತಿ ನಡೆದಿದೆ.
ಶನಿವಾರದಂದು ಗ್ರಾಮದಲ್ಲಿ ಕೇವಲ ಆಸ್ಪತ್ರೆ, ಔಷಧ ಮಳಿಗೆಗಳು ಹೊರತುಪಡಿಸಿ, ಅಂಗಡಿ-ಮುಂಗಟ್ಟುಗಳನ್ನು ಬಾಗಿಲು ತೆರೆಯದೇ ಸಂಪೂರ್ಣ ಬಂದ್ ಮಾಡಲಾಗಿತ್ತು. ಎಲ್ಲ ಬೀದಿಗಳು, ಪ್ರಮುಖ ಸ್ಥಳಗಳು ಬೀಕೂ ಎನ್ನುತ್ತಿದ್ದವು. ಇನ್ನೂ ಮೂರು ದಿನಗಳ ಕಾಲ ಬೆಳಗ್ಗೆ 6 ರಿಂದ 8 ಗಂಟೆಯ ತನಕ ನೀರು, ದನಕರುಗಳಿಗೆ ಮೇವು, ಹಾಲು ತರುವವರಿಗೆ ಮಾತ್ರ ಓಡಾಡಲು ಅವಕಾಶ ಮಾಡಿಕೊಡಲಾಗಿದೆ.
ಬೆಟಗೇರಿ ಗ್ರಾಮಕ್ಕೆ ಬೇರೆ ಹಳ್ಳಿಗಳಿಂದ ಯಾರೂ ಬರಕೂಡದು, ಸ್ಥಳೀಯರು ಸಹ ಬೇರೆ ಊರುಗಳಿಗೆ ಹೋಗಬಾರದು. ಬೀಗರು, ಬಿಜ್ಜರೂ, ಮಕ್ಕಳು, ಅಣ್ಣತಮ್ಮಂದಿರು ಇದ್ದಾರೆ ಅಂತಾ ಸ್ಥಳೀಯರು ತಮ್ಮ ತಮ್ಮ ಮನೆಗಳಲ್ಲಿ ಸೇರಿಸಿಕೊಳ್ಳಬಾರದು. ಅವರು ಇದ್ದ ಸ್ಥಳಗಳಲ್ಲಿ ಇರಲಿ. ಇನ್ನೂ ಮೂರು ದಿನಗಳವರೆಗೆ ನಾವು ವಿಶೇಷವಾಗಿ ಎಲ್ಲರೂ ಮನೆಯಲ್ಲಿರೋಣ, ಕರೊನಾ ಗೆಲ್ಲೂನಾ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಬಳಿಗಾರ ತಿಳಿಸಿದ್ದಾರೆ.
ಭಾನುವಾರ ಸಂತೆ ರದ್ದು: ಬೆಟಗೇರಿ ಗ್ರಾಮದಲ್ಲಿ ಏ.5ರಂದು ನಡೆಯಬೇಕಾಗಿದ್ದ ಭಾನುವಾರ ಸಂತೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಗ್ರಾಮದ ಹಾಗೂ ಸುತ್ತಲಿನ ಹತ್ತೂರಿನ ನಾಗರಿಕರು, ರೈತರು, ಅಂಗಡಿ-ಮುಂಗಟ್ಟು ವ್ಯಾಪಾರಸ್ಥರು ರದ್ದುಗೊಳಿಸಲಾದ ರವಿವಾರ ಸಂತೆಗೆ ಯಾರೂ ಬರದೇ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಸಹಕರಿಸಬೇಕು ಎಂದು ಪಿಡಿಒ ಎಚ್.ಎನ್.ಬಾವಿಕಟ್ಟಿ ಕೋರಿದ್ದಾರೆ