ಘಟಪ್ರಭಾ:ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ರಾಜಕೀಯ ಹಸ್ತಕ್ಷೇಪ ಸಲ್ಲದು : ಶಾಸಕ ಬಾಲಚಂದ್ರ ಜಾರಕಿಹೊಳಿ
ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ರಾಜಕೀಯ ಹಸ್ತಕ್ಷೇಪ ಸಲ್ಲದು : ಶಾಸಕ ಬಾಲಚಂದ್ರ ಜಾರಕಿಹೊಳಿ
ಘಟಪ್ರಭಾ ಅ 8 : ಬಡಿಗವಾಡ ಗ್ರಾಮದ ಶ್ರೇಯೋಭಿವೃದ್ಧಿಗೆ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ರಾಜಕೀಯ ಹಸ್ತಕ್ಷೇಪ ಸಲ್ಲದು ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶನಿವಾರ ರಾತ್ರಿ ಬಡಿಗವಾಡದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಗ್ರಾಮಸ್ಥರನ್ನುದ್ಧೇಶಿಸಿ ಮಾತನಾಡಿದ ಅವರು, ಬಡಿಗವಾಡ ಗ್ರಾಮದ ಪ್ರಗತಿಗಾಗಿ ಕಳೆದ ಒಂದುವರೆ ದಶಕದಿಂದ ವಿವಿಧ ಯೋಜನೆಗಳಡಿ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾಗಿ ಹೇಳಿದರು.
ಮೇ 12 ರಂದು ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಗ್ರಾಮಸ್ಥರು ಅತೀ ಹೆಚ್ಚಿನ ಮತಗಳನ್ನು ನೀಡಿ ನನ್ನ ಗೆಲುವಿಗೆ ಶ್ರಮಿಸಿದ್ದೀರಿ. ಮೊದಲಿನಿಂದಲೂ ನಮ್ಮ ಮನೆತನದ ಬಗ್ಗೆ ಅಪಾರ ಪ್ರೀತಿ-ವಿಶ್ವಾಸವನ್ನಿಟ್ಟುಕೊಂಡಿರುವ ಗ್ರಾಮಸ್ಥರಿಗೆ ನಾನೆಂದೂ ಚಿರಋಣಿಯಾಗಿರುವೆ. ಗ್ರಾಮದ ಅಭಿವೃದ್ಧಿಗಾಗಿ ಎಲ್ಲ ಮುಖಂಡರು ಒಂದಾಗಿ-ಒಗ್ಗಟ್ಟಾಗಿ ದುಡಿಯುತ್ತಿರುವುದು ಸಂತಸ ತಂದಿದೆ. ಒಗ್ಗಟ್ಟಿನಿಂದ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಬಹುಮುಖ್ಯ ಪಾತ್ರವಹಿಸುತ್ತದೆ. ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ಆಸ್ತಿ ಮಾಡುವಂತೆ ಕೋರಿಕೊಂಡ ಅವರು, ಶಿಕ್ಷಣವೊಂದೇ ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಬಡಿಗವಾಡ ಗ್ರಾಪಂ ಅಧ್ಯಕ್ಷ ಪರಸಪ್ಪ ಕುಡ್ಡಗೋಳ ವಹಿಸಿದ್ದರು.
ವೇದಿಕೆಯಲ್ಲಿ ಯಲ್ಲಪ್ಪ ಕುಡ್ಡಗೋಳ, ಪ್ರಭಾಶುಗರ ನಿರ್ದೇಶಕ ಮಾಳಪ್ಪ ಜಾಗನೂರ, ಶಂಕರ ಕಮತಿ, ಕಲ್ಲಪ್ಪ ಚೌಕಶಿ, ಘಯೋನೀಬಮ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಎಪಿಎಂಸಿ ನಿರ್ದೇಶಕ ಪರಸಪ್ಪ ಚೌಕಶಿ, ಬಸು ಸನದಿ, ಯಲ್ಲಪ್ಪ ಮಾಕನ್ನವರ, ಯಲ್ಲಪ್ಪ ನಾಯಿಕ, ಕೆಂಪಣ್ಣಾ ಚೌಕಶಿ, ರಾಮಪ್ಪ ಭಟ್ಟಿ, ಸಿದ್ದಪ್ಪ ಚೂಡಪ್ಪಗೋಳ, ಶಿವು ಕುಡ್ಡೆಮ್ಮಿ, ಯಲ್ಲಾಲಿಂಗ ಚೌಕಶಿ, ವಿಠ್ಠಲ ಮಾಕನ್ನವರ, ರವಿ ಮುಂಗರವಾಡಿ, ಭೀಮಶಿ ಅರಭಾವಿ, ವಸಂತ ರಾಣಪ್ಪಗೋಳ, ಗ್ರಾಪಂ ಸದಸ್ಯರು, ಗಣ್ಯರು ಸುತ್ತಲಿನ ಮುಖಂಡರು ಉಪಸ್ಥಿತರಿದ್ದರು.