ಗೋಕಾಕ:ಕಬ್ಬಿನ ಬಾಕಿ ಬಿಲ್ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘಟನೆಯಿಂದ ಗೋಕಾಕದಲ್ಲಿ ಬೃಹತ್ ಪ್ರತಿಭಟನೆ
ಕಬ್ಬಿನ ಬಾಕಿ ಬಿಲ್ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘಟನೆಯಿಂದ ಗೋಕಾಕದಲ್ಲಿ ಬೃಹತ್ ಪ್ರತಿಭಟನೆ
ಗೋಕಾಕ ಸೆ 5 : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಹಾಗೂ ತಾಲೂಕಾ ಘಟಕದ ವತಿಯಿಂದ ಬುಧವಾರದಂದು ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ ಜಿ.ಎಸ್.ಮಳಗಿ ಅವರಿಗೆ ಮನವಿ ಸಲ್ಲಿಸಿದರು.
ನಗರದ ನಾಕಾ ನಂ1ರಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ರೈತರು ತಮ್ಮ ಚಕ್ಕಡಿಗಳು ಹಾಗೂ ಖಾಸಗಿ ವಾಹನಗಳು ಮತ್ತು ಡೊಳ್ಳು, ಝಾಂಜ ಪಥಕ ಸೇರಿದಂತೆ ವಿವಿಧ ವಾಧ್ಯದೊಂದಿಗೆ ಸೇರಿ ನೂರಾರು ರೈತ ಸಂಘ ಮಹಿಳಾ ಕಾರ್ಯಕರ್ತರು ಸೇರಿದಂತೆ ಸಂಘಟನೆಯ ಎಲ್ಲ ಪದಾಧಿಕಾರಿಗಳು ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ತಾಲೂಕಿನಾದ್ಯಂತ ಮನೆ ಕಟ್ಟಲು ಮರಳು(ಉಸುಕು) ಅವಶ್ಯಕತೆ ಇದ್ದು ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸಬೇಕು. ಕಬ್ಬು ಕಟಾವ ಆಗಿ ಹತ್ತು ತಿಂಗಳಾದರೂ ಕಬ್ಬಿನ ಬಿಲ್ ಪಾವತಿಯಾಗಿಲ್ಲ ಅದನ್ನು ಸಂಬಂಧಿಸಿದ ಸಕ್ಕರೆ ಕಾರ್ಖಾನೆಯವರು ರೈತರಿಗೆ ತಕ್ಷಣ ನೀಡುವಂತಾಗಬೇಕು. ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಲ್ಲಿ ಹೊಳೆತ್ತುವ ಕಾರ್ಯವನ್ನು ಹೊಳು ತುಂಬಿದ ಕೂಡಲೇ ಸರಿಪಡಿಸಬೇಕು. ಮಹಿಳಾ ಸ್ವ ಸಹಾಯ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕೃಷಿ ಯಂತ್ರೋಪಕರಣಗಳ ರೈತರಿಗೆ ಸರಿಯಾದ ಸಮಯಕ್ಕೆ ವಿತರಣೆ ಮಾಡಬೇಕು. ಅತೀ ವೃಷ್ಠಿಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡಬೇಕು. ಅರಣ್ಯ ಭೂಮಿ ಹಾಗೂ ಗೋಮಾಳ ಭೂಮಿ ಒತ್ತುವರಿ ಒಳಗಾದ ಹಕ್ಕು ಪತ್ರ ನೀಡಬೇಕು.ಶಿರೂರ ಡ್ಯಾಂ ನಿಂದ ಕಾಲುವೆಗೆ ನೀರು ಹರಿಸಬೇಕು ಎಂಬ ಬೇಡಿಕೆಗಳನ್ನು ಮನವಿಯಲ್ಲಿ ತಿಳಿಸಿದ್ದಾರೆ.
ಈ ಎಲ್ಲ ಬೇಡಿಕೆಗಳನ್ನು 15 ದಿನದ ಒಳಗಾಗಿ ಈಡೇರಿಸಬೇಕೆಂದು ಇಲ್ಲದಿದ್ದರೆ 2 ಸಾವಿರಕ್ಕೂ ಹೆಚ್ಚು ರೈತರೊಂದಿಗೆ ಬೃಹತ್ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಸಿರು ಸೇನೆ ಜಿಲ್ಲಾ ಘಟಕ ಅಧ್ಯಕ್ಷ ಗಣಪತಿ ಈಳಿಗೇರ, ಕಾರ್ಯಾಧ್ಯಕ್ಷ ಭೀಮಶಿ ಗದಾಡಿ, ಸಂಚಾಲಕ ಮುತ್ತೇಪ್ಪ ಕುರುಬರ, ಕಾರ್ಯದರ್ಶಿ ಮಹಾಂತೇಶ ರಡೇರಟ್ಟಿ, ತಾಲೂಕಾ ಘಟಕದ ಅಧ್ಯಕ್ಷರುಗಳಾದ ಮುತ್ತೇಪ್ಪ ಬಾಗನ್ನವರ, ಪ್ರಕಾಶ ಆಲನ್ನವರ, ಚಿಕ್ಕೋಡಿಯ ತ್ಯಾಗರಾಜ ಕದಂ ಸೇರಿದಂತೆ ನೂರಾರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು,ಮಹಿಳೆಯರು, ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.