ಗೋಕಾಕ:ಬಿಜೆಪಿ ಮುಖಂಡರು ಯುವಕರಲ್ಲಿ ಕೋಮು ಭಾವನೆ ಕೆರಳಿಸಿ ಅಶಾಂತಿಯನ್ನುಂಟು ಮಾಡುತ್ತಿದ್ದಾರೆ : ಸಚಿವ ರಮೇಶ
ಬಿಜೆಪಿ ಮುಖಂಡರು ಯುವಕರಲ್ಲಿ ಕೋಮು ಭಾವನೆ ಕೆರಳಿಸಿ ಅಶಾಂತಿಯನ್ನುಂಟು ಮಾಡುತ್ತಿದ್ದಾರೆ : ಸಚಿವ ರಮೇಶ
ಗೋಕಾಕ ಮಾ 7 ;- ಜಗತ್ತಿಗೆ ಶಾಂತಿ ಸಂದೇಶವನ್ನು ನೀಡಿದ ಭಾರತದಲ್ಲಿ ಅಶಾಂತಿವನ್ನುಂಟು ಮಾಡಲು ಕೋಮುವಾದಿಗಳು ಪ್ರಯತ್ನಿಸುತ್ತಿದ್ದು ಅದನ್ನು ತಡೆಯಲು ಪ್ರತಿಯೊಬ್ಬ ಪ್ರಜೆ ಸಿದ್ಧರಾಗಬೇಕೆಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕರೆ ನೀಡಿದರು.
ಅವರು ಮಂಗಳವಾರದಂದು ಗೋಕಾಕ ಮತಕ್ಷೇತ್ರದ ಗೊಡಚಿನಮಲ್ಕಿ ಗ್ರಾಮದಲ್ಲಿ ಜನರ ಕುಂದು ಕೊರತೆ ವಿಚಾರಣಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಕೋಮುವಾದಿ ಬಿಜೆಪಿ ಮುಖಂಡರು ಜಾತಿ, ಧರ್ಮದ ಹೆಸರಿನಲ್ಲಿ ಯುವಕರಲ್ಲಿ ಕೋಮು ಭಾವನೆ ಕೆರಳಿಸಿ ಅಶಾಂತಿಯನ್ನುಂಟು ಮಾಡುತ್ತಿದ್ದಾರೆ. ಯುವಜನಾಂಗ ಅಂಥವರ ಮಾತಿಗೆ ಮರುಳಾಗದೆ ಶಾಂತಿಪ್ರಿಯ ನಾಡಿನಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಶ್ರಮಿಸಬೇಕೆಂದು ಕೋರಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ನುಡಿದಂತೆ ನಡೆದು ಚುನಾವಣಾ ಸಂದರ್ಭದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಗೋಕಾಕ ಮತಕ್ಷೇತ್ರದಲ್ಲಿ ನೀರಾವರಿ, ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ.
ಗೊಡಚಿನಮಲ್ಕಿ ಏತ ನೀರಾವರಿ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಿ ನೀರಾವರಿ ವಂಚಿತ ಸುತ್ತಮುತ್ತಲಿನ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ ಅವರು, ಕಳೆದ ನಾಲ್ಕು ಬಾರಿ ನಿಮ್ಮ ಆಶೀರ್ವಾದದಿಂದ ಶಾಸಕನಾಗಿ ಈಗ ಸಚಿವನಾಗಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಅತ್ಯಧಿಕ ಅಂತರದಿಂದ ಆಯ್ಕೆ ಮಾಡಿ ದಾಖಲೆ ನಿರ್ಮಿಸಲು ಆಶೀರ್ವದಿಸಬೇಕೆಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಗೋಕಾಕ ಮತಕ್ಷೇತ್ರದ ಕಡಬಗಟ್ಟಿ, ಗಡ್ಡಿಹೊಳಿ, ಶೀಗಿಹೊಳಿ, ಉರಬನಟ್ಟಿ, ಬೆನಚಿನಮರಡಿ, ಕನಸಗೇರಿ, ತವಗ, ಕೈತನಾಳ, ಹೊಸೂರ, ಗಡಾ, ರಾಜನಕಟ್ಟಿ, ಪಂಜಾನಟ್ಟಿ, ತಾವರಟ್ಟಿ, ಅಕ್ಕತಂಗೇರಹಾಳ, ಡುಮ್ಮುನಉರಬನಟ್ಟಿ, ಮದವಾಲ, ಈರನಟ್ಟಿ, ತೆಳಗಿನಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಕುಂದು ಕೊರತೆ ವಿಚಾರಿಸಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಮತ ನೀಡಿ ಆಶೀರ್ವದಿಸುವಂತೆ ಕೋರಿದರು.
ಈ ಕಾರ್ಯಕ್ರಮಗಳಲ್ಲಿ ಜಿ.ಪಂ.ಸದಸ್ಯರಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ರಾಮಣ್ಣಾ ಸುಂಬಳ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಡೋಣಿ, ಮುಖಂಡರುಗಳಾದ ರಾಜು ತಳವಾರ, ಮಲ್ಲಿಕಾರ್ಜುನ ನಾಯಿಕ, ಜನಪ್ರತಿನಿಧಿಗಳು, ಗ್ರಾಮದ ಮುಖಂಡರು, ಕಾಂಗ್ರೇಸ್ ಕಾರ್ಯಕರ್ತರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.