RNI NO. KARKAN/2006/27779|Saturday, August 2, 2025
You are here: Home » breaking news » ಘಟಪ್ರಭಾ:ಅರಭಾವಿ ಕ್ಷೇತ್ರದ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ : ಶಾಸಕ ಬಾಲಚಂದ್ರ

ಘಟಪ್ರಭಾ:ಅರಭಾವಿ ಕ್ಷೇತ್ರದ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ : ಶಾಸಕ ಬಾಲಚಂದ್ರ 

ಅರಭಾವಿ ಕ್ಷೇತ್ರದ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ : ಶಾಸಕ ಬಾಲಚಂದ್ರ

ಘಟಪ್ರಭಾ ಫೆ 21 : ಅರಭಾವಿ ಪಟ್ಟಣದ ಅಭಿವೃದ್ಧಿಗೆ ನಗರೋತ್ಥಾನ ಯೋಜನೆ ಸೇರಿದಂತೆ ಒಟ್ಟು 12.03 ಕೋಟಿ ರೂ. ಅನುದಾನದಲ್ಲಿ ನಾನಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಅರಭಾವಿಯ ಮಾರುತಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸಂಜೆ ಪಟ್ಟಣ ಪಂಚಾಯತಿಯಿಂದ ಜರುಗಿದ 5 ಕೋಟಿ ರೂ. ವೆಚ್ಚದ ನಗರೋತ್ಥಾನ-3 ಯೋಜನೆಯಡಿ ವಿವಿಧ ಕಾಮಗಾರಿಗಳ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿದ ನಂತರ ಅರಭಾವಿ ಪಟ್ಟಣದ ಅಭಿವೃದ್ಧಿಗೆ ಎಸ್‍ಎಫ್‍ಸಿ ಕುಡಿಯುವ ನೀರಿಗಾಗಿ 29.33 ಲಕ್ಷ ರೂ, 14ನೇ ಮೂಲ ಹಣಕಾಸು ಯೋಜನೆಯಡಿ 39.23 ಲಕ್ಷ ರೂ, ಎಸ್‍ಎಫ್‍ಸಿ ಮುಕ್ತ ನಿಧಿ 1.79 ಕೋಟಿ ರೂ, 14ನೇ ಸಾಮಾನ್ಯ ಮೂಲ ಹಣಕಾಸು ಯೋಜನೆಯಡಿ 1.54 ಕೋಟಿ ರೂ, 14ನೇ ಸಾಮಾನ್ಯ ಕಾರ್ಯಾಧಾರಿತ ಯೋಜನೆಯಡಿ 25.78 ಲಕ್ಷ ರೂ, ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ 1 ಕೋಟಿ ರೂ, ಕಿತ್ತೂರ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿ ಕಿತ್ತೂರಿನ ಮಲ್ಲಸರ್ಜ ಅವರ ಸಮಾಧಿ ಮಂಟಪಕ್ಕೆ 25 ಲಕ್ಷ ರೂ, ಎಸ್‍ಎಫ್‍ಸಿ ಅನುದಾನದಡಿ ಪಟ್ಟಣ ಪಂಚಾಯತಿ ಕಟ್ಟಡಕ್ಕೆ 1 ಕೋಟಿ ರೂ, ಕನಕಭವನ ನಿರ್ಮಾಣಕ್ಕೆ 10 ಲಕ್ಷ ರೂ.ಗಳು ಸೇರಿದಂತೆ 7.03 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿವೆ ಎಂದು ಹೇಳಿದರು.
ಪಟ್ಟಣದ ಸಮಗ್ರ ಅಭಿವೃದ್ಧಿಗೆ ನಗರೋತ್ಥಾನ 3ನೇ ಹಂತದ ಯೋಜನೆಗಾಗಿ 5 ಕೋಟಿ ರೂ. ಅನುದಾನ ಬಂದಿದ್ದು, ಇದರಲ್ಲಿ 4.25 ಕೋಟಿ ರೂ.ಗಳ ಕಾಮಗಾರಿಗಳು ನಡೆಯಲಿವೆ. ರಸ್ತೆಗಾಗಿ 2.08 ಕೋಟಿ ರೂ, ಒಳಚರಂಡಿಗಾಗಿ 54.04 ಲಕ್ಷ ರೂ, ಸಾರ್ವಜನಿಕ ಶೌಚಾಲಯಕ್ಕಾಗಿ 52 ಲಕ್ಷ ರೂ, ಕುಡಿಯುವ ನೀರಿನ ಕಾಮಗಾರಿಗಳಿಗಾಗಿ 1.10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಎಪ್ರೀಲ್ ತಿಂಗಳೊಳಗೆ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.
ನಾಡಕಛೇರಿ ಮುಂದುವರಿಕೆ : ನಾಡಕಛೇರಿಯು ಅರಭಾವಿಯಲ್ಲಿ ಮುಂದುವರೆಯಲಿದ್ದು, ಸಾರ್ವಜನಿಕರ ಕೆಲಸಗಳು ಸುಗಮವಾಗಲಿವೆ. ಅರಭಾವಿ ಪಟ್ಟಣ ಪಂಚಾಯತ ವ್ಯಾಪ್ತಿಯ ಸಾರ್ವಜನಿಕರು ಇದರ ಬಗ್ಗೆ ಆತಂಕಕ್ಕೆ ಒಳಗಾಗಬಾರದು ಎಂದರು.
ಗುಡ್ಡದವಾರಿ ರಹವಾಸಿಗಳಿಗೆ ಹಕ್ಕುಪತ್ರಗಳನ್ನು ಶೀಘ್ರದಲ್ಲಿ ವಿತರಿಸಲಾಗುವುದು ಎಂದು ಹೇಳಿದ ಅವರು, ಯುವಕರು ದುಶ್ಚಟಗಳಿಂದ ದೂರವಿರಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಒಳ್ಳೆಯ ಹೆಸರು ಬರುತ್ತದೆ. ಒಂದಾಗಿ-ಒಗ್ಗಟ್ಟಾಗಿದ್ದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಹೊಂದುತ್ತದೆ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. 40 ಲಕ್ಷ ರೂ. ವೆಚ್ಚದ ಪ್ರವಾಸೋದ್ಯಮ ಇಲಾಖೆಯ ಯಾತ್ರಿ ನಿವಾಸ ಹಾಗೂ ಸುವರ್ಣ ಗ್ರಾಮೋದಯ ಯೋಜನೆಯಡಿ 40 ಲಕ್ಷ ರೂ, ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಕಲ್ಯಾಣ ಮಂಟಪವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರಭಾವಿಮಠದ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
ಅಧ್ಯಕ್ಷತೆಯನ್ನು ಅರಭಾವಿ ಪಪಂ ಅಧ್ಯಕ್ಷೆ ಪದ್ಮಾವತಿ ದೇವುಗೋಳ ವಹಿಸಿದ್ದರು.
ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ಉಪಾಧ್ಯಕ್ಷ ಬಸಗೌಡ ಪಾಟೀಲ, ಶಿವಯ್ಯ ಹಿರೇಮಠ, ಜಿಪಂ ಮಾಜಿ ಸದಸ್ಯ ಶಂಕರ ಬಿಲಕುಂದಿ, ಮುತ್ತೆಪ್ಪ ಝಲ್ಲಿ, ನಿಂಗಪ್ಪ ಇಳಿಗೇರ, ಭೀಮಪ್ಪ ಹಳ್ಳೂರ, ರಾಯಪ್ಪ ಬಂಡಿವಡ್ಡರ, ಪಪಂ ಉಪಾಧ್ಯಕ್ಷ ರಮೇಶ ಮಾದರ, ಅಶೋಕ ಖಂಡ್ರಟ್ಟಿ, ವಿಠ್ಠಲ ಸವದತ್ತಿ, ಸತ್ತೆಪ್ಪ ಬಡಾಯಿ, ಭೀಮಪ್ಪ ಸಂಪಗಾಂವಿ, ಕೆಂಪಣ್ಣಾ ಕಡಲಗಿ, ಸಾತಪ್ಪ ಜೈನ, ಬಸವರಾಜ ಮಾಳೇದವರ, ಅಶೋಕ ಅಂಗಡಿ, ಮುತ್ತೆಪ್ಪ ಕುಳ್ಳೂರ, ಪ್ರಕಾಶ ಕೊಂಗಾಲಿ, ಸುನೀಲ ಜಮಖಂಡಿ, ಪಪಂ ಸರ್ವ ಸದಸ್ಯರು, ಮುಖ್ಯಾಧಿಕಾರಿ ಕೆ.ಬಿ. ಬೆಣ್ಣಿ, ಮುಂತಾದವರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅರಭಾವಿಯ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಅತ್ಮೀಯವಾಗಿ ಸತ್ಕರಿಸಿದರು.

ಬಾಲಚಂದ್ರ ಜಾರಕಿಹೊಳಿ, ಶಾಸಕರು. : ಬಾಲಚಂದ್ರ ಅವರಂತಹ ಶಾಸಕರನ್ನು ಪಡೆದಿರುವುದು ಅರಭಾವಿ ಕ್ಷೇತ್ರದ ಭಾಗ್ಯವೆಂದು ಸ್ವಾಮೀಜಿಗಳು ಸೇರಿದಂತೆ ಹಲವರು ಹೇಳುತ್ತಿರುತ್ತಾರೆ. ಆದರೆ ಅರಭಾವಿ ಕ್ಷೇತ್ರದ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ. 1992 ರಿಂದ ಅರಭಾವಿ ಮತಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ಎಲ್ಲ ಸಮುದಾಯದ ಜನರು ಪ್ರೀತಿ-ವಿಶ್ವಾಸ ತೋರುತ್ತಿರುವುದನ್ನು ನೋಡುತ್ತಿದ್ದರೇ ಇಂತಹವರು ಸಿಕ್ಕಿರುವುದು ನನ್ನ ಭಾಗ್ಯವೆಂದು ತಿಳಿದುಕೊಂಡಿದ್ದೇನೆ. ಜನರ ಪ್ರೀತಿ-ವಿಶ್ವಾಸಕ್ಕೆ ಸದಾ ಚಿರಋಣಿಯಾಗಿದ್ದೇನೆ. ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿ ಅರಭಾವಿ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಆಶೀರ್ವಾದ ಮಾಡಿ.

Related posts: