RNI NO. KARKAN/2006/27779|Sunday, August 3, 2025
You are here: Home » breaking news » ಮೂಡಲಗಿ:ರೈತರ ಹಿತದೃಷ್ಟಿಯಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಮನವಿ

ಮೂಡಲಗಿ:ರೈತರ ಹಿತದೃಷ್ಟಿಯಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಮನವಿ 

ರೈತರ ಹಿತದೃಷ್ಟಿಯಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಮನವಿ
ಮೂಡಲಗಿ ನ 12: ರೈತರ ಹಿತದೃಷ್ಟಿಯಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಕೋರಿದ್ದಾರೆ.
ಇಲ್ಲಿಗೆ ಸಮೀಪದ ಹೊಸಯರಗುದ್ರಿ ಗ್ರಾಮದಲ್ಲಿ ಶನಿವಾರ ರಾತ್ರಿ 2 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಈಗಾಗಲೇ ರೈತರು ಬಿತ್ತನೆ ಮಾಡುತ್ತಿದ್ದಾರೆ. ಬಿತ್ತನೆಗೈದ ಬೆಳೆಗಳಿಗೆ ನೀರಿನ ಅವಶ್ಯಕತೆ ಇದ್ದು, ಕೂಡಲೇ ಹಿಡಕಲ್ ಜಲಾಶಯದಿಂದ ಎರಡೂ ಕಾಲುವೆಗಳಿಗೆ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಗೋಧಿ, ಕಡಲೆ, ಮೆಕ್ಕೆಜೋಳ, ಸದಕ, ಜೋಳ, ಸೂರ್ಯಪಾನ, ಹತ್ತಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ನೀರು ಹರಿಸುವುದು ಅವಶ್ಯವಿದೆ. ಆದ್ದರಿಂದ ರೈತರ ಒಳತಿಗಾಗಿ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ತಲಾ 3 ಟಿಎಂಸಿ ನೀರು ಹರಿಸಬೇಕೆಂದು ಅವರು ಕೋರಿದ್ದಾರೆ.
ಬಹುದಿನಗಳ ಬೇಡಿಕೆಯಾಗಿದ್ದ ಹೊಸಯರಗುದ್ರಿ ಗ್ರಾಮದ ತಿಮ್ಮಾಪೂರ ಹಳ್ಳಕ್ಕೆ ಬ್ರಿಡ್ಜ್-ಕಮ್-ಬ್ಯಾರೇಜ್ ಕಾಮಗಾರಿಯನ್ನು ಸಾರ್ವಜನಿಕರಿಗೆ ಅರ್ಪಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ 1.50 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್-ಕಮ್-ಬ್ಯಾರೇಜ್ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದರಿಂದ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಇಡೇರಿದಂತಾಗಿದೆ. ಜೊತೆಗೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಂಡಿವೆ. ಯರಗುದ್ರಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ಅವರು ಹೇಳಿದರು.
2004 ರಿಂದ ಅರಭಾವಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಶ್ರಮಿಸಲಾಗುತ್ತಿದೆ. ಎಂದಿಗೂ ದ್ವೇಷದ ರಾಜಕೀಯ ಮಾಡಿಲ್ಲ. ಜನರ ಪ್ರೀತಿ ವಿಶ್ವಾಸಕ್ಕೆ ಚ್ಯುತಿ ಬರದಂತೆ ಅಭಿವೃದ್ಧಿಗೆ ಆದ್ಯತೆ ನೀಡಿರುವುದಾಗಿ ಹೇಳಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಆದರ್ಶಗಳನ್ನು ಪಾಲನೆ ಮಾಡಬೇಕಿದೆ. ದಲಿತರಲ್ಲಿ ಜಾಗೃತಿ ಮೂಡಿಸಬೇಕಿದೆ. ಶೈಕ್ಷಣಿಕವಾಗಿ ಮುಂದೆ ಬರುವಂತೆ ಬಾಂಧವರಿಗೆ ತಿಳಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ 1.50 ಕೋಟಿ ರೂ. ವೆಚ್ಚದ ಬ್ರಿಡ್ಜ್-ಕಮ್-ಬ್ಯಾರೇಜ್ ಕಾಮಗಾರಿಯನ್ನು ನೆರವೇರಿಸಿದರು. ಹೊಸದಾಗಿ ಪ್ರತಿಷ್ಠಾಪಿಸಲಾದ ಡಾ.ಅಂಬೇಡ್ಕರ ಪುತ್ಥಳಿಯನ್ನು ಅನಾವರಣಗೊಳಿಸಿದರು. 30 ಲಕ್ಷ ರೂ. ವೆಚ್ಚದ ಎಸ್‍ಸಿಪಿ ಯೋಜನೆಯಡಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಸ್ಥಳೀಯ ಈರಾಲಿಂಗೇಶ್ವರ ಮಠದ ಸ್ವಾಮಿಗಳು ಸಾನಿಧ್ಯವಹಿಸಿದ್ದರು.

ಜಿಪಂ ಸದಸ್ಯ ಗೋವಿಂದ ಕೊಪ್ಪದ, ತಾಪಂ ಸದಸ್ಯ ಸದಾಶಿವ ದುರಗನ್ನವರ, ಗಿರೀಶ ನಾಡಗೌಡ, ಕಲ್ಲಪ್ಪ ರಂಜನಗಿ, ರಾಜು ಲಕ್ಕಾರ, ಅಜ್ಜಪ್ಪ ಗಿರಡ್ಡಿ, ನಿಂಗಪ್ಪಗೌಡ ನಾಡಗೌಡ, ಎಂ.ಎಂ. ಪಾಟೀಲ, ಆರ್.ಕೆ. ಮಹಾರಡ್ಡಿ, ಮಾರುತಿ ಹರಿಜನ, ಸುಭಾಸ ಪಾಟೀಲ, ಲಕ್ಷ್ಮಣ ತೆಳಗಡೆ, ರಮೇಶ ಸಣ್ಣಕ್ಕಿ, ಹನಮಂತ ಪೂಜೇರಿ, ಶಾಂತಪ್ಪ ಹಿರೇಮೇತ್ರಿ, ಗಿರೀಶ ಹಳ್ಳೂರ, ಜಿಆರ್‍ಬಿಸಿ ಇಇ ಗಿಡ್ಡೋಳಿ, ಸಣ್ಣ ನೀರಾವರಿ ಇಲಾಖೆಯ ಎಇ ಜೈಭೀಮ, ಮುಂತಾದವರು ಉಪಸ್ಥಿತರಿದ್ದರು.

ಅವರಾದಿ ಗ್ರಾಪಂ ಅಧ್ಯಕ್ಷ ಸತ್ತೆಪ್ಪ ನಾಯಿಕ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. ಅವರಾದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ಶಾಸಕರು ಪ್ರಸಕ್ತ ವರ್ಷದಲ್ಲಿ ಸುಮಾರು 6 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದಾರೆಂದು ತಿಳಿಸಿದರು. ಸುರೇಶ ವಂಟಗೋಡಿ ಸ್ವಾಗತಿಸಿ, ವಂದಿಸಿದರು.

Related posts: