ಗೋಕಾಕ:ಜಿಲ್ಲೆಗಾಗಿ ಆಗ್ರಹಿಸಿ ನಾಳೆ ಗೋಕಾಕ ಸಂಪೂರ್ಣ ಬಂದ್ : ಮುರುಘರಾಜೇಂದ್ರ ಶ್ರೀ

ಜಿಲ್ಲೆಗಾಗಿ ಆಗ್ರಹಿಸಿ ನಾಳೆ ಗೋಕಾಕ ಸಂಪೂರ್ಣ ಬಂದ್ : ಮುರುಘರಾಜೇಂದ್ರ ಶ್ರೀ
ಗೋಕಾಕ ಡಿ 2 : ಗೋಕಾಕ ನೂತನ ಜಿಲ್ಲೆಗೆ ಆಗ್ರಹಿಸಿ ನಾಳೆ ಗೋಕಾಕ ನಗರವನ್ನು ಸಂಪೂರ್ಣ ಬಂದ್ ಮಾಡಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಗುವುದು ಎಂದು ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು
ಮಂಗಳವಾರದಂದು ಶೂನ್ಯ ಸಂಪಾದನ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು
ಕಳೆದ ನಾಲ್ಕು ದಶಕಗಳಿಂದ ಗೋಕಾಕ ಜಿಲ್ಲೆಗಾಗಿ ಹೋರಾಟ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಗೋಕಾಕ ಜಿಲ್ಲಾ ಕೇಂದ್ರ ಮಾಡಲು ಒತ್ತಾಯಿಸಿ ನಿಯೋಗವನ್ನು ಕರೆದುಕೊಂಡು ಮುಖ್ಯಮಂತ್ರಿಗಳಿಗೆ ಬೇಟಿಯಾಗಿ ಮನವಿ ಅರ್ಪಿಸಲಾಗುವುದು ಮತ್ತು ಅಧಿವೇಶನ ಸಂದರ್ಭದಲ್ಲಿ ಗೋಕಾಕ್ ನಗರದಲ್ಲಿ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಅದಕ್ಕೆ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಜನರು ಸಹಕರಿಸಬೇಕು ಎಂದು ಮನವಿ ಮಾಡಿದ ಅವರು ಸರಕಾರ ಮೊದಲು ಗೋಕಾಕ ಜಿಲ್ಲೆ ಮಾಡಲಿ ನಂತರ ಉಳಿದ ತಾಲೂಕುಗಳನ್ನು ಜಿಲ್ಲೆಗಳನ್ನು ಮಾಡಲಿ ಎಂದು ಆಗ್ರಹಿಸಿದರು.
ನಾಳೆ ನಡೆಯುವ ಬಂದ್ ನಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮುಂಜಾನೆ 10 ಘಂಟೆಗೆ ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿ ತಹಶೀಲ್ದಾರ್ ಅವರ ಮುಖಾಂತರ ಸರಕಾರಕ್ಕೆ ಮನವಿ ಅರ್ಪಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟವನ್ನು ಬೆಂಬಲಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿ ಗೋಕಾಕ ಜಿಲ್ಲೆ ಮಾಡಲಿಕ್ಕೆ ಸರಕಾರದ ಇಚ್ಚಾಶಕ್ತಿ ಕೊರತೆಯಿದೆ. ರಾಜ್ಯದಲ್ಲಿ ಬಹಳ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದರೂ ಕೂಡ ಕಳೆದ 4 ದಶಕಗಳಿಂದ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕ ಜಿಲ್ಲೆ ಮಾಡಲಿಲ್ಲ. ಹಲವು ತಾಲೂಕುಗಳು ಜಿಲ್ಲೆ ಬೇಡಿಕೆ ಇಟ್ಟಿವೆ ಆದರೆ ಸರಕಾರ ಯಾವ ತಾಲೂಕನ್ನು ಜಿಲ್ಲೆ ಮಾಡಿದರೆ ಸೂಕ್ತ ಎಂಬುದನ್ನು ವಿಚಾರ ಮಾಡಿ ನಿಯೋಗಗಳ ವರದಿ ಆಧರಿಸಿ ನೂತನ ಜಿಲ್ಲೆ ಮಾಡಬೇಕು. ಬಳ್ಳಾರಿ ಜಿಲ್ಲೆಯನ್ನು ಒಡೆದು ಹೊಸಪೇಟೆಯನ್ನು ಜಿಲ್ಲೆ ಮಾಡಲು ಶಾಸಕ ಆನಂದ ಅವರು ಒಬ್ಬರು ಮಾತ್ರ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಿದ ಕಾರಣ ಹೊಸಪೇಟೆ ಜಿಲ್ಲೆ ಆಗಿದೆ ಹಾಗೆನೆ ನಮ್ಮ ಶಾಸಕರು, ಸಚಿವರು ,ವಿಧಾನ ಪರಿಷತ್ ಸದಸ್ಯರು ಗೋಕಾಕ ಜಿಲ್ಲೆ ಮಾಡಲು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ಮುಖಂಡ ರಾಜೇಂದ್ರ ಸಣ್ಣಕ್ಕಿ ಮಾತನಾಡಿ ಹಿಂದೆ ಗೋಕಾಕ ಜಿಲ್ಲೆ ಆಗಿ ನಾವೆಲ್ಲರೂ ವಿಜಯೋತ್ಸವ ಮಾಡಿದ್ದೇವೆ.ಆದರೆ ಕೆಲವರ ಬಲವಾದ ವಿರೋಧದ ನಡುವೆ ಸರಕಾರ ಅದನ್ನು ಹಿಂದೆ ಪಡೆಯಿತು. ಜಾರಕಿಹೊಳಿ ಸಹೋದದರು ಮನಸ್ಸು ಮಾಡಿದರೆ ಗೋಕಾಕ ಜಿಲ್ಲೆ ಆಗುವದರಲ್ಲಿ ಎರೆಡು ಮಾತಿಲ್ಲ ಅವರು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಚಾಲನಾ ಸಮಿತಿಯ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ ಮಾತನಾಡಿ 1998 ರಲ್ಲಿ ಚಾಲನಾ ಸಮಿತಿಯಿಂದ ಹಲವು ರೂಪದ ಉಗ್ರ ಪ್ರಮಾಣದಲ್ಲಿ ಹೋರಾಟಗಳು ನಡೆದಿವೆ.ಹಾಗೆ ಪ್ರಸ್ತುತ ದಿನಮಾನಗಳಲ್ಲಿ ಉಗ್ರ ಸ್ವರೂಪದ ಹೋರಾಟಗಳನ್ನು ಮಾಡಬೇಕು.. ಜೆ.ಎಚ್.ಪಟೇಲರು ಗೋಕಾಕ ಜಿಲ್ಲೆ ಮಾಡಿದರು ಆಗ ಹಲವಾರು ವಿರೋಧ ಮಾಡಿದರ ಪರವಾಗಿ ಗೆಜೆಟ್ ತಡೆ ಹಿಡಿದಿದ್ದಾರೆ. ಗೋಕಾಕ ಜಿಲ್ಲೆ ಆದರೂ ಜಾರಕಿಹೊಳಿ ಸಹೋದದರಿಂದ ಜಿಲ್ಲೆ ಆಗದಿದ್ದರೂ ಅದು ಜಾರಕಿಹೊಳಿ ಸಹೋದರರಿಂದ ಇದನ್ನು ಮನಗಂಡು ಜಾರಕಿಹೊಳಿ ಸಹೋದರರು ಗೋಕಾಕ ಜಿಲ್ಲೆಯ ಮಾಡಬೇಕು ಎಂದು ಮನವಿ ಮಾಡಿದರು.
ನ್ಯಾಯವಾದಿ ಸಂಘದ ಅಧ್ಯಕ್ಷ ಸುಭಾಸ ಪಾಟೀಲ ಅವರು ಮಾತನಾಡಿ ವಕೀಲರ ಸಂಘದಿಂದ ಹಲವು ರೀತಿಯ ಚಳುವಳಿಗಳನ್ನು ಹಮ್ಮಿಕೊಂಡು ಸರಕಾರದ ಗಮನ ಸಳೆಯಲಾಗುತ್ತಿದೆ. ಗೋಕಾಕ ಜಿಲ್ಲೆಯಂದು ಹಿಂದೆ ಗೆಜೆಟ್ ಮಾಡಲಾಗಿದೆ. ಅದನ್ನು ರಿಓಪನ್ ಮಾಡಿಕೊಂಡು ಬರುವಲ್ಲಿ ಸರಕಾರದ ಮಟ್ಟದಲ್ಲಿ ಕಾರ್ಯವಾಗಬೇಕು. ವರ್ತಕರು , ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ
ಬೃಹತ್ ರೀತಿಯಲ್ಲಿ ಹೋರಾಟ ಮಾಡಬೇಕು. ನ್ಯಾಯಾಲದ ಕಲಾಪಗಳನ್ನು ಬಹಿಷ್ಕರಿಸಿ ನಾವು ಜಿಲ್ಲಾ ಹೋರಾಟಕ್ಕೆ ಸದಾ ಬೆಂಬಲವನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಅತಿದೊಡ್ಡ ಜಿಲ್ಲೆ. ದೊಡ್ಡ ಜಿಲ್ಲೆಗೂ ಅಷ್ಟೇ ಅನುದಾನ ಸಣ್ಣ ಜಿಲ್ಲೆಗೂ ಅಷ್ಟೇ ಅನುದಾನ ಇದು ಅಭಿವೃದ್ಧಿಗೆ ಕುಂಟಿತಿವಾಗತ್ತದೆ. ಹಾಗಾಗಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಮಾಡಿ ಅಭಿವೃದ್ಧಿಗೆ ಸಹಕರಿಸಬೇಕು ಎಂದ ಅವರು ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಜಾರಕಿಹೊಳಿ ಕುಟುಂಬ ಪೂರ್ಣ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆ ಆದಷ್ಟು ಬೇಗ ಗೋಕಾಕ್ ನೂತನ ಜಿಲ್ಲೆ ಆಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಾತ್ರಾ ಕಮಿಟಿಯ ಪ್ರಭು ಚವ್ಹಾಣ, ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಮುರಾರಿ, ಅಡಿವೆಪ್ಪ ಕಿತ್ತೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
