ಮೂಡಲಗಿ:ಹೊಸ ತಾಲೂಕಾಗಿ ಮೂಡಲಗಿ ಘೋಷಣೆ : ಮಾತು ಉಳಿಸಿಕೊಂಡ ಶಾಸಕ ಬಾಲಚಂದ್ರ
ಹೊಸ ತಾಲೂಕಾಗಿ ಮೂಡಲಗಿ ಘೋಷಣೆ : ಮಾತು ಉಳಿಸಿಕೊಂಡ ಶಾಸಕ ಬಾಲಚಂದ್ರ
ಮೂಡಲಗಿ ಅ 11: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಿಸಿರುವುದಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿ, ಇದಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅಭಿನಂದಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಮೂಡಲಗಿ ತಾಲೂಕು ರಚನೆಯಿಂದ ಮೂಡಲಗಿ ಭಾಗದ ಎಲ್ಲ ನಾಗರೀಕರಿಗೆ ಆಡಳಿತಾತ್ಮಕ ಅನುಕೂಲವಾಗಲಿದೆ. ಇದರಿಂದ ಬಹು ವರ್ಷಗಳ ಬೇಡಿಕೆಗೆ ಕೊನೆಗೂ ಸರಕಾರ ಮನ್ನಣೆ ನೀಡಿದಂತಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸರ್ಕಾರ ಬಜೆಟ್ ಸಂದರ್ಭದಲ್ಲಿ ಘೋಷಿಸಿದ್ದ, ಮೂಡಲಗಿ ಪಟ್ಟಣವನ್ನು ಸೆ.6 ರಂದು ಹೊಸ ತಾಲೂಕುಗಳ ಆದೇಶ ಪಟ್ಟಿಯಲ್ಲಿ ಕೈಬಿಟ್ಟಿರುವುದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆದರೂ ಪಟ್ಟುಬಿಡದೇ ಸತತ ಬೆಂಗಳೂರಿನಲ್ಲಿದ್ದುಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಹಲವು ಬಾರಿ ಭೇಟಿ ಮಾಡಿ ಕೈ ಬಿಟ್ಟಿರುವ ಮೂಡಲಗಿಯನ್ನು ಮರು ಘೋಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ.
ಮೂಡಲಗಿ ಭಾಗದ ಜನತೆಗೆ ನೀಡಿದ ಆಶ್ವಾಸನೆಯಂತೆ ಮೂಡಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಒಂದು ವೇಳೆ ಮೂಡಲಗಿಯನ್ನು ಹೊಸ ತಾಲೂಕು ಕೇಂದ್ರವಾಗದಿದ್ದಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆಂದು ಮಾತು ನೀಡಿದ್ದೆ. ಕೈಬಿಟ್ಟಿರುವ ಮೂಡಲಗಿ ಪಟ್ಟಣ ಹೊಸ ತಾಲೂಕಾಗುವುದು ಸಲಿಸಾದ ಕೆಲಸವಲ್ಲ. ಇದೊಂದು ಕಷ್ಟದ ಕೆಲಸ. ಒಮ್ಮೆ ಸಂಪುಟ ಸಭೆಯಲ್ಲಿ ಕೈಬಿಟ್ಟರೆ ಮತ್ತೊಮ್ಮೆ ಸಂಪುಟಕ್ಕೆ ತರುವುದು ಸುಲಭದ ಮಾತಲ್ಲ. ನಾನು ಹಾಗೂ ಸಚಿವ ರಮೇಶ ಜಾರಕಿಹೊಳಿ ಕೂಡಿಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೆ ಸತತ ಒತ್ತಡ ಹೇರಿದ್ದರಿಂದ ಮೂಡಲಗಿ ನೂತನ ತಾಲೂಕು ಕೇಂದ್ರವಾಯಿತು. ತಾಲೂಕು ರಚನೆಗಾಗಿ ಕೆಲವರು ಪ್ರಾಮಾಣಿಕ ಹೋರಾಟ ಮಾಡಿದ್ದರೇ, ಇನ್ನೂ ಕೆಲವರು ರಾಜಕೀಯ ದುರುದ್ಧೇಶದಿಂದ ನಮ್ಮ ಪ್ರತಿಷ್ಠೆಯನ್ನು ಹಾಳು ಮಾಡಲು ಹೋರಾಟ ಸಮೀತಿಯೊಂದಿಗೆ ಕೈಜೋಡಿಸಿದ್ದಾರೆ. ಇದರಲ್ಲಿ ಗೆದ್ದಿರುವುದು ಮೂಡಲಗಿ ಭಾಗದ ಜನರು ಮಾತ್ರ ಎಂಬುದನ್ನು ಯಾರೂ ಮರೆಯಬಾರದು ಎಂದು ಅವರು ಹೇಳಿದ್ದಾರೆ.
ಸರ್ಕಾರ ಮೂಡಲಗಿಯನ್ನು ಕೈಬಿಟ್ಟಿದ್ದರಿಂದ ನನ್ನ ವಿರುದ್ಧ ಸಾಕಷ್ಟು ಜನರು ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸಿದರು. ಅಪಪ್ರಚಾರ ಮಾಡಿದರು. ಆದರೂ ಇದ್ಯಾವುದಕ್ಕೂ ನಾನು ಕಿವಿಗೊಡಲಿಲ್ಲ. ಒಬ್ಬ ಶಾಸಕನಾಗಿ ನನ್ನ ಕರ್ತವ್ಯವನ್ನು ಮೂಡಲಗಿ ಭಾಗದ ಜನರ ಹಿತದೃಷ್ಟಿಯಿಂದ ಮುಂದುವರೆಸಿಕೊಂಡು ಹೋಗಿದ್ದೇನೆ. ಯಾರಿಂದಲೂ ನಾನು ಪಾಠ ಕಲಿಯುವ ಅಗತ್ಯವೂ ಇಲ್ಲ ಎಂದು ಅವರು ಹೇಳಿದ್ದಾರೆ. ಮೂಡಲಗಿ ತಾಲೂಕಾಗುವವರೆಗೆ ಕ್ಷೇತ್ರಕ್ಕೆ ಕಾಲಿಡುವುದಿಲ್ಲ. ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವವರೆಗೂ ಸ್ವ-ಕ್ಷೇತ್ರಕ್ಕೆ ಮರಳುವುದಿಲ್ಲವೆಂದು ಹೇಳಿದ್ದೆ ಎಂಬುದನ್ನು ಸ್ಮರಿಸಿಕೊಂಡ ಅವರು, ಮೂಡಲಗಿ ತಾಲೂಕಾಗಲು ಸಹಕರಿಸಿ, ಇಂದಿನ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ತುಂಬು ಹೃದಯದಿಂದ ಅಭಿನಂದಿಸಿದರು. ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಸ ಕುಂಟಿಯಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅತೀಕ, ಕಂದಾಯ ಇಲಾಖೆಯ ಪ್ರಭಾರಿ ಪ್ರಧಾನ ಕಾರ್ಯದರ್ಶಿ ಸುಭಾಸಚಂದ್ರ, ಬೆಳಗಾವಿ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಜಿಯಾವುಲ್ಲಾ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳ ಸಹಕಾರದಿಂದ ಕೈಬಿಡಲಾಗಿದ್ದ ಮೂಡಲಗಿ ಪಟ್ಟಣ ರಾಜ್ಯದಲ್ಲಿ 50ನೇ ಹೊಸ ತಾಲೂಕು ಕೇಂದ್ರವಾಗಿ ಅಸ್ಥಿತ್ವಕ್ಕೆ ಬಂದಿತು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕಿಗೆ ಅನುಮೋದನೆ ನೀಡಿದ್ದರಿಂದ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ಎಂಎಲ್‍ಸಿ ವಿವೇಕರಾವ್ ಪಾಟೀಲ, ನೆಲಮಂಗಲ ಮಾಜಿ ಶಾಸಕ ಎಂ.ವ್ಹಿ. ನಾಗರಾಜು ಅವರು ಹೂಗುಚ್ಚ ಅರ್ಪಿಸಿ ಅಭಿನಂದನೆ ಸಲ್ಲಿಸಿದರು.