ಗೋಕಾಕ:ಬಿಸಿಯೂಟ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ : ಎ.ಬಿ.ಮಲಬನ್ನವರ
ಬಿಸಿಯೂಟ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ : ಎ.ಬಿ.ಮಲಬನ್ನವರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 18 :
ಕೊವಿಡ್ ಸಂಧರ್ಭದಲ್ಲಿಯೂ ಸಹ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಬಿಸಿಯೂಟ ಆಹಾರ ಧಾನ್ಯಗಳನ್ನು ವಿತರಿಸಿರುವ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ಎ.ಬಿ.ಮಲಬನ್ನವರ ಹೇಳಿದರು.
ಬುಧವಾರದಂದು ನಗರದ ಶಾಸಕರ ಕಾರ್ಯಾಲಯದಲ್ಲಿ ಗೋಕಾಕ ವಲಯದ ಮುಖ್ಯೋಪಾಧ್ಯಾಯರಿಗೆ ಬಿಸಿಯೂಟ ರಜಿಸ್ಟರ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಶಾಸಕ ರಮೇಶ ಜಾರಕಿಹೊಳಿ ಅವರ ಶೈಕ್ಷಣಿಕ ಕಾಳಜಿಯ ಪ್ರತಿಫಲವಾಗಿ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗುತ್ತಿದ್ದು, ಶಾಲೆಯ ಮುಖ್ಯೋಪಾಧ್ಯಾಯರು ಸ್ವಯಂ ಪ್ರೇರಿತವಾಗಿ ವಿದ್ಯಾರ್ಥಿಗಳಿಗೆ ಪೂರಿ, ಪಲಾವ, ಇಡ್ಲಿ , ಭಜಿ ಸೇರಿದಂತೆ ವಿವಿಧ ಬಗೆಯ ರುಚಿಕರ ಭೋಜನದ ವ್ಯವಸ್ಥೆಯನ್ನು ಮಾಡಿ ರಾಜ್ಯಕ್ಕೆ ಮಾದರಿ ಕಾರ್ಯಮಾಡುತ್ತಿದೆ.
ಅಗಸ್ಟ 23 ರಿಂದ 9, 10 ತರಗತಿಯ ಶಾಲೆಗಳು ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಬಿಸಿಯೂಟ ವಿತರಿಸುವುದರ ಜೊತೆಗೆ ಊಟದ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಲಯದ ಎಲ್ಲಾ ಮುಖ್ಯೋಪಾಧ್ಯಾಯರಿಗೆ ಮಕ್ಕಳ ಹಾಜರಿ,ಆಹಾರ ವಿತರಣೆ, ಹಾಲಿನ ವಿತರಣೆ, ಶಾಲೆಗೆ ಭೇಟಿ ನೀಡಿದವರ ಸಂದರ್ಶನ ( ವಹಿ) ರಜಿಸ್ಟರಗಳನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರುಗಳಾದ ಬಿ.ಆರ್.ಮುರಗೋಡ, ಎನ್..ಟಿ.ಬಡವಣೆ, ಆರ.ಎಂ ಅಳಗನ್ನವರ, ಎಂ.ಎಲ್. ಹಸರಂಗಿ, ಎಸ್.ಎಸ್.ಮಾಳಗಿ, ಸಂಜೀವ ನಾಯಿಕ, ಪಿ.ಬಿ.ಹಂಜಿ, ಬಿ.ಎಸ್.ನಂದೆಪ್ಪನ್ನವರ, ಎಂ.ಎಸ್.ಬಿರಾದಾರಗೌಡರ, ಎಸ್.ಬಿ.ಹನಮಂತನವರ, ಬಿಸಿಯೂಟ ಸಿಬ್ಬಂದಿ ದಯಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.