ಗೋಕಾಕ:ವೈಜ್ಞಾನಿಕವಾಗಿ ಜಗತ್ತು ಎಷ್ಟೆ ಮುಂದುವರೆದರೂ ಕೂಡಾ ರಕ್ತವನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ : ಮುರುಘರಾಜೇಂದ್ರ ಶ್ರೀ
ವೈಜ್ಞಾನಿಕವಾಗಿ ಜಗತ್ತು ಎಷ್ಟೆ ಮುಂದುವರೆದರೂ ಕೂಡಾ ರಕ್ತವನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ : ಮುರುಘರಾಜೇಂದ್ರ ಶ್ರೀ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 2 :
ವೈಜ್ಞಾನಿಕವಾಗಿ ಜಗತ್ತು ಎಷ್ಟೆ ಮುಂದುವರೆದರೂ ಕೂಡಾ ರಕ್ತವನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ, ಅದನ್ನು ದಾನಿಗಳಿಂದಲೇ ಪಡೆಯಬೇಕಾಗಿದೆ ಎಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಸೋಮವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗ ದಳ, ಎಚ್‍ಡಿಎಫ್‍ಸಿ ಬ್ಯಾಂಕ್ ಹಾಗೂ ರೋಟರಿ ರಕ್ತ ಭಂಡಾರ ಇವುಗಳ ಸಂಯುಕ್ತಾಶ್ರಯದಲ್ಲಿ ಅಯೋಧ್ಯ ಬಲಿದಾನ ದಿನದ ಅಂಗವಾಗಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು, ರಕ್ತದಾನ ಮಾಡುವುದರಿಂದ ಮತ್ತೋಬ್ಬರ ಜೀವವನ್ನು ಉಳಿಸಿ ಪರೋಪಕಾರದಂತಹ ಸತ್ಕಾರದಲ್ಲಿ ಪಾಲ್ಗೊಂಡಂತಾಗುತ್ತದೆ. ರಕ್ತದಾನದಿಂದ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಪ್ರವೃತ್ತರಾಗಿರುವ ಭಜರಂಗದಳದ ಕಾರ್ಯಕರ್ತರ ಕಾರ್ಯ ಮಾದರಿಯಾಗಿದೆ. ದೇಶ ಸೇವೆಗೆ ತಮ್ಮನ್ನು ತೊಡಗಿಸಿಕೊಂಡ ಇನ್ನು ಹೆಚ್ಚಿನ ಸಮಾಜಮುಖಿ ಕಾರ್ಯಗಳು ಮೂಡಿ ಬರಲಿ. ಎಲ್ಲರೂ ಇಂಥ ಕಾರ್ಯಗಳಿಗೆ ಸಹಕಾರ ನೀಡುವಂತೆ ಕರೆ ನೀಡಿದರು.
ವಿಎಚ್‍ಪಿಯ ನಾರಾಯಣ ಮಠಾಧಿಕಾರಿ ಮಾತನಾಡಿ, ಬಜರಂಗದಳದ ಲಕ್ಷಾಂತರ ಕಾರ್ಯಕರ್ತರು ದೇಶಾಯಾಧ್ಯಂತ ರಕ್ತದಾನದಂತಹ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ದೇಶ ಕಟ್ಟುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಆರ್‍ಎಸ್‍ಎಸ್ ಬೆಳಗಾವಿ ವಿಭಾಗದ ಸಂಘಚಾಲಕ ಎಮ್.ಡಿ.ಚುಮನರಿ, ಬಜರಂಗದಳದ ಬೆಳಗಾವಿ ವಿಭಾಗ ಸಂಚಾಲಕ ಸದಾಶಿವ ಗುದಗಗೋಳ, ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ, ಪಿಎಸ್‍ಐ ಎ.ಟಿ.ಅಮ್ಮಿನಭಾಂವಿ, ರೋಟರಿ ರಕ್ತ ಭಂಡಾರ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೋಳಿ, ರೋಟರಿ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಕಡಕೋಳ, ಕಾರ್ಯದರ್ಶಿ ರಾಜು ವರದಾಯಿ, ಎಚ್‍ಡಿಎಫ್‍ಸಿ ಬ್ಯಾಂಕಿನ ಮ್ಯಾನೇಜರ್ ವಿಜಯಾನಂದ ಮಟ್ಟಿಕಲಿ ಇದ್ದರು.