ಬೆಳಗಾವಿ:ಆನಂದ ಅಪ್ಪುಗೋಳ ವಿರುದ್ಧ ಠೇವಣಿದಾರರು ಮುಂದೆ ಬಂದು ಆಯಾ ಪೊಲೀಸ್ ಠಾಣೆಗಳಲ್ಲಿ FIR ದಾಖಲಿಸಿ : ಶಂಕರ ಮುನವಳ್ಳಿ
ಆನಂದ ಅಪ್ಪುಗೋಳ ವಿರುದ್ಧ ಠೇವಣಿದಾರರು ಮುಂದೆ ಬಂದು ಆಯಾ ಪೊಲೀಸ್ ಠಾಣೆಗಳಲ್ಲಿ FIR ದಾಖಲಿಸಿ : ಶಂಕರ ಮುನವಳ್ಳಿ
ಬೆಳಗಾವಿ ಸೆ 3: ಶ್ರೀ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೊಸೈಟಿ ಹಾಗೂ ಶ್ರೀ ಭೀಮಾಂಬಿಕಾ ಸೌಹಾರ್ಧ ಸೊಸೈಟಿ ಮತ್ತು ಗಿರಿರಾಜ ಎಂಬ ಏಕವ್ಯಕ್ತಿ ಮಾಲಿಕತ್ವದ ಬ್ಯಾಂಕಿಂಗ್ ಸಂಸ್ಥೆಗಳು ಮುಗ್ದ ಜನರ ಕೋಟ್ಯಾಂತರ ಹಣ ಠೇವಣಿ ಪಡೆದು ಹಿಂದಿರುಗಿಸದೇ ಅದರ ಮಾಲೀಕ ಈಗ ಪರಾರಿಯಾಗಿರುವುದು ಖೇದಕರ ಎಂದು ಶಂಕರ ಮುನವಳ್ಳಿ ಇಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುನವಳ್ಳಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ಎಲ್ಲ ಪಕ್ಷಗಳೊಂದಿಗೆ ಸಂಪರ್ಕ ಹೊಂದಿರುವ ಆನಂದ ಅಪ್ಪುಗೋಳ ಎಂಬಾತ 52 ಶಾಖೆಗಳನ್ನು ತೆರೆದು ಮಾಧ್ಯಮಗಳಲ್ಲಿ ಸತತ ಆಸೆ ಆಮೀಷದ ಜಾಹೀರಾತು ನೀಡಿ ಗ್ರಾಹಕರನ್ನು ಆಕರ್ಷಿಸಿ ಕೊನೆಗೆ ಠೇವಣಿ ಹಿಂದಿರುಗಿಸದೇ ಮೋಸ ಮಾಡಿದ್ದಾನೆ.
ಜಿಲ್ಲಾಡಳಿತ, ಪೊಲೀಸ್, ಸಹಕಾರ ಇಲಾಖೆ, ಆರ್ ಬಿಐ, ಕೇಂದ್ರ ಆದಾಯ ತೆರಿಗೆ ಇಲಾಖೆ ಮತ್ತಿತರ ಸಂಸ್ಥೆಗಳು ಈ ಸೊಸೈಟಿಗಳ ಎಲ್ಲ ಕಾರ್ಯ ಚಟುವಟಿಕೆಗಳ ಬಗ್ಗೆ ಗಮನ ಇಟ್ಟು ಪರಿಶೀಲನೆ ಮಾಡದಿರುವ ನ್ಯೂನ್ಯತೆ ಕಂಡುಬಂದಿದೆ. ಸಾವಿರಾರು ಜನ ಗ್ರಾಹಕರ ನೋವು ಮತ್ತು ದೂರಿಗೆ ಸ್ಪಂದಿಸಿ ಜಿಲ್ಲಾಧಿಕಾರಿ ಸ್ವಯಂಪ್ರೇರಣೆಯಿಂದ ಕೇಸ್ ದಾಖಲಿಸಬೇಕು. ಮೋಸಕ್ಕೊಳಗಾದ ಗ್ರಾಹಕ ಠೇವಣಿದಾರರು ತತಕ್ಷಣ ಮುಂದೆ ಬಂದು ಆಯಾ ಪೊಲೀಸ್ ಠಾಣೆಗಳಲ್ಲಿ FIR ದಾಖಲಿಸಬೇಕು, ಇದರಿಂದ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಮುನವಳ್ಳಿ ಕರೆ ನೀಡಿದರು.
ಸುಮಾರು 1700 ಕೋಟಿವರೆಗೆ ವಂಚನೆ ಮಾಡಿದ ಬಗ್ಗೆ ಸ್ವತಃ ಗ್ರಾಹಕ ವಲಯದಿಂದ ಆರೋಪ ಕೇಳಿ ಬಂದಿದೆ ಎಂದರು. ದೇಶದ ಸ್ವಾತಂತ್ರ್ಯಕ್ಕೆ ದುಡಿದ ವೀರ ಸಂಗೊಳ್ಳಿ ರಾಯಣ್ಣನ ಹೆಸರು ಸಂಸ್ಥೆಗೆ ಇಟ್ಟುಕೊಂಡು ಆ ಮೂಲಕ ಅದೇ ಸಮಾಜದ (ಕುರುಬ) ಆನಂದ ಅಪ್ಪುಗೋಳ ಆ ಸಮಾಜವೇ ಇಂದು ತಲೆ ತಗ್ಗಿಸುವಂತೆ ಮಾಡಿ ತಲೆಮರೆಸಿಕೊಂಡಿದ್ದಾನೆ ಎಂದು ಖೇದ ವ್ಯಕ್ತಪಡಿಸಿದರು. ಆನಂದ ಅಪ್ಪುಗೋಳ ಯಾವುದೇ ಕ್ಷಣದಲ್ಲಿ ದೇಶದಿಂದಲೇ ಪರಾರಿಯಾಗುವ ಆತಂಕ ಎದುರಾಗಿದ್ದು, ಜಿಲ್ಲಾಡಳಿತ ತತಕ್ಷಣ ಆತನ ಎಲ್ಲ ಆಸ್ತಿಪಾಸ್ತಿಗಳನ್ನು ತನ್ನ ವಶಕ್ಕೆ ಪಡೆದು ಹರಾಜು ಹಾಕಿ ಬಂದ ಹಣದಿಂದ ಠೇವಣಿದಾರರಿಗೆ ಅವರವರ ಠೇವಣಿ ಮೊತ್ತದ ಹಣ ಹಂಚುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರನ್ನು ಒತ್ತಾಯಿಸಿದರು
ಸಹಕಾರಿ (co-operative) ಇಲಾಖೆಯ ಅಧಿಕಾರಿಗಳು ಭ್ರಷ್ಟತನಕ್ಕೆ ಒಳಗಾಗಿ ಆನಂದ ಅಪ್ಪುಗೋಳ ಜತೆ ಇಂತಹ ಅಕ್ರಮ ನಡೆಯಲು ಸ್ವತಃ ಶಾಮೀಲಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮುನವಳ್ಳಿ ಆರೋಪಿಸಿದರು. ಪಾತ್ರೆ ತೊಳೆಯುವ ಬಡವರಿಂದ ಹಿಡಿದು ನಿವೃತ್ತ ಸರಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳು ಸಹ ಇಲ್ಲಿ ಹಣ ಇಟ್ಟು ಈಗ ಕೈ ಸುಟ್ಟುಕೊಂಡಿದ್ದಾರೆ. ೩೮ ಸಂಗೊಳ್ಳಿ ರಾಯಣ್ಣ, ೧೨ ಶ್ರೀ ಭೀಮಾಂಬಿಕಾ ಹಾಗೂ ೦೨ ಗಿರಿರಾಜ ಹೆಸರಿನ ಸಂಸ್ಥೆಗಳು ಸೇರಿ ಒಟ್ಟು 52 ಶಾಖೆಗಳಿರುವುದು ಗಮನಾರ್ಹ.
ಅನ್ಯಾಯಕ್ಕೊಳಗಾದ ಪ್ರತಿ ಗ್ರಾಹಕರು ಕೂಡಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದರು.
