ಗೋಕಾಕ:ಕನ್ನಡ ಗಟ್ಟಿಗೊಳಿಸುವ ಕೆಲಸಕ್ಕೆ “ಕನ್ನಡ ಸಾಹಿತ್ಯ ಪರಿಷತ್” ಘಟಕಗಳು ಮುಂದಾಗಲಿ !

ಕನ್ನಡ ಗಟ್ಟಿಗೊಳಿಸುವ ಕೆಲಸಕ್ಕೆ “ಕನ್ನಡ ಸಾಹಿತ್ಯ ಪರಿಷತ್” ಘಟಕಗಳು ಮುಂದಾಗಲಿ !
ವಿಶೇಷ ಲೇಖನ
ಹಿಂದೊಂದು ದಿನ ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ಹೆಸರು ಕೇಳಿದರೆ ಸಾಕು, ಅವರು ಸಂಘಟಿಸುವ ಕಾರ್ಯಕ್ರಮಗಳಲ್ಲಿ, ಸಮ್ಮೇಳನಗಳಲ್ಲಿ, ಸಭೆಗಳಲ್ಲಿ ಜನರು ಕಿಕ್ಕಿರಿದು ಸೇರುತ್ತಿದ್ದರು. .ಆ ಮಟ್ಟಿಗಿನ ಖದರ್ ಆ ಸಾಹಿತಿಗಳದ್ದು. ಪರಿಷತ್ತನ್ನು ಮುನ್ನಡೆಸುವವರು ಗಟ್ಟಿ ಸಾಹಿತ್ಯ ಬಲ್ಲವರು, ಪ್ರಬಲ ಹೋರಾಟಗಾರರು, ಕನ್ನಡಕ್ಕಾಗಿ ತಮ್ಮ ಸರ್ವಸ್ವವನ್ನು ಮುಡಿಪಾಗಿ ಇಡುವವರು. ಒಟ್ಟಾರೆಯಾಗಿ ಕನ್ನಡವನ್ನು ಕಣಕಣದಲ್ಲಿ ತುಂಬಿಕೊಂಡು ಕನ್ನಡವನ್ನು ಉಳಿಸಿ ಬೆಳೆಸುವ ಅಗಾಧ ಇರಾದೆಯನ್ನು ಹೊಂದಿದ್ದರ ಪರಿಣಾಮವಾಗಿ ಆಗಿನ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ರಾಜ್ಯದ ಮೂಲೆ, ಮೂಲೆಗಳಲ್ಲಿ ಕನ್ನಡ ಶಾಲೆ, ಶಾಲೆಗಳಲ್ಲಿ ಸಾಕಷ್ಟು ಕನ್ನಡದ ಕೆಲಸಗಳು ಸಡಗರದಿಂದ ನಡೆಯುತ್ತಿದ್ದವು.
ಆಗಿನ ಕನ್ನಡ ಶಾಲೆಗಳಲ್ಲಿ ಈಗಿನ ಹಾಗೆ ಬಿಸಿಯೂಟ, ಕ್ಷೀರಭಾಗ್ಯ, ಶೂಭಾಗ್ಯ ಇರಲಿಲ್ಲ. ಶಾಲಾ ಕೊಠಡಿಗಳಲ್ಲಿ ಕರೆಂಟ್ ವ್ಯವಸ್ಥೆಯಂತೂ ಮೊದಲೇ ಇರಲಿಲ್ಲ. ಆದರೂ ಸಹ ಆಗಿನ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳಿಂದ ಭಾಗಶಃ ಶಾಲೆಗಳಲ್ಲಿ ದತ್ತಿ ಉಪನ್ಯಾಸಗಳು ಏರ್ಪಾಡಾಗುತ್ತಿದ್ದವು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತವೆ ಎಂದು ತಿಳಿದರೆ ಸಾಕು, ಆ ಶಾಲೆಯ ಮುಖ್ಯೋಪಾಧ್ಯಾಯರು ಹಿರಿಹಿರಿ ಹಿಗ್ಗುತ್ತಿದ್ದರು . ವಿದ್ಯಾರ್ಥಿಗಳು ಸಹ ಅಷ್ಟೇ ಉತ್ಸಾಹದಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅಷ್ಟೊಂದು ಭಾಷಾಭಿಮಾನ ಅಂದಿನ ಶಿಕ್ಷಕ ಮತ್ತು ವಿದ್ಯಾರ್ಥಿಗಳಲ್ಲಿ ನೋಡಲು ಸಿಗುತ್ತಿತ್ತು. ಕಸಾಪ ಸದಸ್ಯರು ಅತ್ಯಂತ ಕ್ರಿಯಾಶೀಲರಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳನ್ನು ಮಾಡುತ್ತಿದ್ದರು. ಬಾಳೇ ತೋರಣ, ಬ್ಯಾನರಗಳನ್ನು ಉತ್ಸಾಹದಿಂದ ಕಟ್ಟಿ ಕನ್ನಡ ಪುಸ್ತಕಗಳ ಬಂಡಲ್‍ಗಳನ್ನು ಹೊತ್ತು ತರುತ್ತಿದ್ದರು . ಸಮಾರಂಭಕ್ಕೆ ಸ್ಥಳೀಯ ಸಾಹಿತಿಗಳು ಅಷ್ಟೇ ಉತ್ಸಾಹದಿಂದ ಬಂದು ಮಕ್ಕಳಿಗೆ ಸಾಹಿತ್ಯ ಪರಿಚಯಿಸುತ್ತಿದ್ದರು. ಇವೆಲ್ಲ ಕಾರ್ಯಗಳು ಅಂದು ಒಂದು ಮಂತ್ರದಂತೆ ನಡೆದು ಹೋಗುತ್ತಿದ್ದವು. ಅದು ಹೇಗೆ ಎಂದು ಇಂದು ಯೋಚಿಸಿದಾಗ ಅನಿಸುತ್ತದೆ. ಕಸಾಪ -ಶಾಲೆ-ಸಾಹಿತಿ ಈ ಮೂವರು ಕನ್ನಡದ ಸೇವಾಭಾವದಿಂದಾಗಿ ಅದು ಸಾಧ್ಯವಾಗುತ್ತಿತ್ತು ಎಂದರೆ ಅಚ್ಚರಿಯಿಲ್ಲ.

ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಓದು ಇಲ್ಲ, ಕನ್ನಡದ ಒಬ್ಬ ಸಾಹಿತಿಯ ಬಗ್ಗೆ ಮಕ್ಕಳಿಗೆ ಮಾಹಿತಿ ಇಲ್ಲ. ಅವರು ಸಾಹಿತ್ಯ ಅಂದರೇನು ಎಂಬುದಾಗಿ ಪ್ರಶ್ನಿಸುತ್ತಾರೆ. ಇಷ್ಟೊಂದು ಅಧೋಗತಿಗೆ ಇಂದಿನ ಮಕ್ಕಳ ಸಾಹಿತ್ಯಾಭಿರುಚಿ ಕುಸಿದಿರುವದು ಶೋಚನೀಯ ಎಂದು ಕಸಾಪ ಏರ್ಷಡಿಸಿದ್ದ ಸಾಹಿತ್ಯ ಸಮಾವೇಶ, ಸಂವಾದದಂತಹ ಸಮಾರಂಭದಲ್ಲಿ ಸಾಹಿತಿಗಳು, ಗಣ್ಯರು ಕಣ್ಣೀರು ಸುರಿಸುತ್ತಾರೆ. ಆದರೆ ಅದರ ಪ್ರತಿಫಲ ಮಾತ್ರ ಶೂನ್ಯ. ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗೆಗಿನ ಆಸಕ್ತಿ ಕುಸಿದಿದೆ ಎಂದು ಆರೋಪ ಮಾಡುವ ಶಿಕ್ಷಕರಾಗಲ್ಲಿ, ಕಸಾಪ ಪದಾಧಿಕಾರಿಗಳಾಗಲ್ಲಿ, ಹೋರಾಟಗಾರರಾಗಲಿ, ಸೃಜನಶೀಲ ಸಾಹಿತಿಗಳಾಗಲ್ಲಿ, ಪತ್ರಕರ್ತರಾಗಲಿ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವಲ್ಲಿ ತಮ್ಮ ಪಾತ್ರವೇನು ಎಂದು ಒಮ್ಮೆ ಪ್ರಶ್ನಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ.
ಸರಕಾರಿ ಶಾಲೆಗಳಲ್ಲಿ ಈಗ ವಿದ್ಯುತ್ ಇದೆ, ಸ್ಮಾರ್ಟ್ ಕ್ಲಾಸ್ ಇವೆ, ಅಗತ್ಯ ಮೂಲ ಸೌಲಭ್ಯಗಳಿವೆ. ಆದರೆ ಕಸಾಪ ಪದಾಧಿಕಾರಿಗಳು ಅತ್ತ ಸುಳಿಯುತ್ತಿಲ್ಲ. ಕೆಲವು ದತ್ತಿ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಮಕ್ಕಳಲ್ಲಿ ಸಾಹಿತ್ಯ ಪರಿಚಯಿಸುವಂತಹ ಕೆಲಸಗಳನ್ನು ಕಸಾಪ ತಾಲೂಕು ಘಟಕಗಳು ಮಾಡುತ್ತಿಲ್ಲ ಎಂಬ ಆರೋಪ ಶಿಕ್ಷಕರಿಂದ ಹಾಗೂ ಸಾರ್ವಜನಿಕರಿಂದ ಕೇಳಿ ಬರುತ್ತಿದೆ .
ಮೊದಲು ಎಳೆಯ ಮನಸ್ಸುಗಳಲ್ಲಿ ಸಾಹಿತ್ಯದ ಅಭಿರುಚಿ ಹುಟ್ಟಬೇಕು. ಸಾಹಿತ್ಯದ ಅಭಿರುಚಿ ಇಲ್ಲದೆ ಮಗುವಿನಲ್ಲಿ ಸಾಹಿತ್ಯ ಹುಟ್ಟಲು ಸಾಧ್ಯವಿಲ್ಲ. ಅದನ್ನು ನಿರೀಕ್ಷಿಸುವದು ಸಹ ಹುಚ್ಚುತನ. ಕಳೆದ ಇಪ್ಪತ್ತು ವರ್ಷಗಳ ಹಿಂದೆ ಎಳೆಯ ಮನಸ್ಸುಗಳಲ್ಲಿ ಸಾಹಿತ್ಯದ ಅಭಿರುಚಿ ಬಿತ್ತುವ ವಾತಾವರಣವನ್ನು ಕಸಾಪ ಘಟಕಗಳು ನಿರ್ಮಿಸುತ್ತಿದ್ದವು. ಶಿಕ್ಷಕರೇ ಸ್ವತಃ ಮುಂದಾಗಿ ಸಾಹಿತ್ಯದ ಅಭಿರುಚಿ ಹುಟ್ಟುವ ಪೂರಕ ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದ್ದರು .
ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವಷ್ಟು ಪುರಸೊತ್ತು ಇಂದಿನ ಶಿಕ್ಷಕರಿಗೆ ಇಲ್ಲ, ಕೆಲವರಿಗೆ ಪುರಸೊತ್ತು ಇದ್ದರೂ ಸಹ ಸರಕಾರ ಆ ಪುರಸೊತ್ತನ್ನು ಕಿತ್ತುಕೊಂಡು ಅವರಿಗೆ ಅನ್ಯ ಕೆಲಸಗಳಲ್ಲಿ ತೊಡಗಿಸಿಕೊಳ್ಳವಂತೆ ಮಾಡಿದೆ. ಸ್ವರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಈಗಿನ ಶಿಕ್ಷಕರು ನೇಮಕವಾಗುತ್ತಿರುವ ಪರಿಣಾಮ ಶಿಕ್ಷಕರಲ್ಲಿ ಸಾಹಿತ್ಯದ ಅಧ್ಯಯನ ಕೊರತೆ ಕಂಡು ಬರುತ್ತದೆ. ಶಾಲೆಗಳಲ್ಲಿ ಸಾಹಿತ್ಯದ ಓದಿನ ಸಂಸ್ಕೃತಿ ಇಲ್ಲವಾಗಲು ಇದು ಮೂಲ ಕಾರಣವಾಗಿದೆ .
ಎಲ್ಲಾ ಸರಕಾರಿ ಶಾಲೆಗಳಲ್ಲಿ ನಲಿಕಲಿ ಯೋಜನೆಯಡಿಯಲಿ ಕುವೆಂಪು, ಯು.ಆರ್.ಅನಂತಮೂರ್ತಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ.ಕೃ.ಗೋಕಾಕ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರರ ಒಂದಿಷ್ಟು ಚಿತ್ರಗಳನ್ನು ಶಾಲೆಯ ಗೋಡೆಗಳ ಮೇಲೆ ನೇತು ಹಾಕಿರುತ್ತಾರೆ. ಆದರೆ ಆ ಮಹಾನ್ ವ್ಯಕ್ತಿಗಳ ಸಾಹಿತ್ಯ ಸಾಧನೆಗಳ ಬಗ್ಗೆ ಮಕ್ಕಳಿಗೆ ಕನಿಷ್ಠ ಮಾಹಿತಿಯೂ ಇರುವದಿಲ್ಲ. ಸರಕಾರಿ ಯೋಜನೆಗಳ ಮೂಲಕ ಶಾಲೆಗಳಲ್ಲಿ ಸಾಹಿತ್ಯ ಮತ್ತು ಸಾಹಿತಿಗಳನ್ನು ಪರಿಚಯಿಸುವ ಕಾರ್ಯ ನಡೆಯುತ್ತಿದ್ದರೂ ಸಹ ಶಿಕ್ಷಕರಲ್ಲಿಯ ಸಾಹಿತ್ಯದ ಅಭಿರುಚಿ, ಅಧ್ಯಯನದ ಕೊರತೆಯಿಂದಾಗಿ ಕನ್ನಡದ ಭಾವೀ ಸಾಹಿತ್ಯ ರಚನೆಕಾರರು ಅರಳುವ ಮುನ್ನವೇ ಬಾಡಿ ಹೊಗುತ್ತಿದ್ದಾರೆ.
ಗಡಿನಾಡಿನ ಶಾಲೆಗಳಲ್ಲಿ ಹಿಂದೆ ಕಸಾಪ ಘಟಕಗಳು ಸಕ್ರಿಯವಾಗಿ ಸಾಹಿತ್ಯ ಅಭಿರುಚಿಯನ್ನು ಬಿತ್ತುವ ಕಾರ್ಯ ಮಾಡುತ್ತಿದ್ದವು. ಹಾಗೆಯೇ ಸನ್ 1970, 80, 90ರ ದಶಕಗಳಲ್ಲಿ ರಾಜ್ಯದ ಪದವಿ ಕಾಲೇಜು, ವಿಶ್ವ ವಿದ್ಯಾಲಯಗಳಲ್ಲಿ ಯುವ ಸಾಹಿತಿಗಳ ಪಡೆಯೇ ತಯಾರಾಗುತ್ತಿದ್ದವು. ಆದರೆ ಇಂದು ಆ ಪರಿಸ್ಥಿತಿ ಇಲ್ಲ. ಮಕ್ಕಳಲ್ಲಿ-ಯುವಕರಲ್ಲಿ ಸಾಹಿತ್ಯದ ಅಭಿರುಚಿ ಹುಟ್ಟಿಸಬೇಕಾದ ಕಸಾಪ ಘಟಕಗಳು ಈಗ ಏನು ಮಾಡುತ್ತಿವೆ. ಅಂದಿನ ಪರಿಷತ್ತಿನ ಆಶಯಗಳನ್ನು ಇಂದಿನ ಪರಿಷತ್ತಿನ ಘಟಕಗಳು ಎಷ್ಟರ ಮಟ್ಟಿಗೆ ಪೋಷಿಸಿಕೊಂಡು ಬರುತ್ತಿವೆ ಎಂದು ನೋಡ ಹೊರಟರೆ, ಗಡಿನಾಡಿನಲ್ಲಿ ಭಾಷಾ ಬಾಂಧವ್ಯಗಳನ್ನು ಕಟ್ಟಿ ಬೆಳೆಸಲು ಅವು ವಿಫಲವಾಗಿವೆ. ನಿಷ್ಕಿøಯಗೊಂಡಿವೆ. ಈ ಸತ್ಯವನ್ನು ಇಂದಿನ ರಾಜ್ಯ ಘಟಕದ ಅಧ್ಯಕ್ಷರಾದ ಮನು ಬಳಗಾರರು ಒಪ್ಪುತ್ತಾರೆ. ಆದರೆ ಅವರೆಂದೂ ಗಡಿ ಭಾಗಗಳಲ್ಲಿ ಕಸಾಪ ಘಟಕಗಳನ್ನು ಸಕ್ರಿಯಗೊಳಿಸಲು ಕನಿಷ್ಠ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮನಸ್ಸು ಮಾಡಿದಿರುವದು ಬೇಸರ ಮೂಡಿಸುವ ಸಂಗತಿ..
ರಾಜ್ಯಕ್ಕೆ ಹೊಂದಿಕೊಂಡಿರುವ ಗೋವಾ, ಮಹಾರಾಷ್ಟ್ರ, ತೆಲಂಗಾಣದಂತಹ ರಾಜ್ಯಗಳ ಗಡಿಭಾಗದಲ್ಲಿರುವ ಹಳ್ಳಿಗಳಲ್ಲಿ ಶೇಕಡಾ 90ರಷ್ಟು ಕನ್ನಡಿಗರಿದ್ದಾರೆ. ಅಂತಹ ಗಡಿ ಗ್ರಾಮಗಳಲ್ಲಿ ಕಸಾಪ-ಕನ್ನಡ ಅಭಿವೃದ್ಧಿ ಆಶಯ ಕಾಪಾಡುವ ಒಂದೇ ಒಂದು ಕಾರ್ಯಕ್ರಮ ಆಯೋಜಿಸಿಲ್ಲ ಎಂಬುದು ದುಃಖದ ವಿಷಯ. ಹೀಗೆ ಗಡಿ ಪ್ರದೇಶದಲ್ಲಿರುವ ಬೆಳಗಾವಿ, ವಿಜಯಪುರ, ಬೀದರ್, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಒಂದೇ ಒಂದು ಗ್ರಾಮದಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ಅಲ್ಲಿನ ಕಸಾಪ ಘಟಕಗಳು ಹಮ್ಮಿಕೊಂಡಿಲ್ಲ. ಅವುಗಳಿಗೆ ಉತ್ತೇಜನ ನೀಡಬೇಕಾದ ಕಸಾಪ ಬರಿಯ ಅಧಿಕಾರದ ಸ್ಥಾನವಾಗಿದೆ. ಬೇಸರದ ಸಂಗತಿ ಎಂದರೆ ನಾಡಿಗೆ ದಿಗ್ಗಜ ಸಾಹಿತಿಗಳನ್ನು ನೀಡಿದ ರಾಜ್ಯದ ಎರಡನೇ ಅತಿ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿಯೂ ಸಹ ಕಸಾಪ ಘಟಕಗಳು ಸಾಹಿತ್ಯ ಸಮ್ಮೇಳನಗಳನ್ನು ಏರ್ಷಡಿಸುವದನ್ನು ಬಿಟ್ಟರೆ ಬೇರೆ ಯಾವ ಕನ್ನಡದ ಗಟ್ಟಿ ಕೆಲಸಕ್ಕೆ ಕೈ ಹಾಕಿಲ್ಲ. ಇದ್ದಕ್ಕಿಂತಲೂ ಬೇಸರದ ಸಂಗತಿ ಎಂದರೆ ಕೆಲ ದಿನಗಳ ಹಿಂದೆ ಕನ್ನಡಿಗರನ್ನು ಅಗಲಿದ ಕನ್ನಡಕ್ಕೆ 6 ನೇ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಗಿರೀಶ್ ಕಾರ್ನಾಡ್ ನಿಧನರಾದಾಗ ಬಹುತೇಕ ತಾಲುಕು, ಹೋಬಳಿ ಮಟ್ಟದಲ್ಲಿಯ ಕಸಾಪ ಘಟಕಗಳು ಸಂತಾಪ ಸೂಚಿಸುವ ಗೋಜಿಗೆ ಹೋಗಿರುವದಿಲ್ಲ.
ರಾಜ್ಯದ ಬಹುತೇಕ ತಾಲೂಕಾ ಕೇಂದ್ರಗಳಲ್ಲಿ ಸಾಹಿತ್ಯೇತರರು, ಕನ್ನಡದ ಅಭಿರುಚಿಯನ್ನು ಹೊಂದಿಲ್ಲದಿರುವವರು, ವ್ಯಾಪಾರಸ್ಥರು, ಜಾತೀಯವಾದಿಗಳು ಕಸಾಪ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಅದಲ್ಲದೆ ಜಿಲ್ಲಾ ಅಧ್ಯಕ್ಷರಾದವರು ಅಂತಹವರಿಗೆ ಸಕ್ರಿಯ ಸಾಹಿತ್ಯ ಚುಟುವಟಿಕೆಗಳನ್ನು ನಡೆಸುವಂತೆ ಸಲಹೆ ಸೂಚನೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮವಾಗಿ ಇಂದಿನ ಕಸಾಪ ಘಟಕಗಳು ಸಾರ್ವಜನಿಕರಲ್ಲಿ ಸಾಹಿತ್ಯದ ಅಭಿರುಚಿಯನ್ನು ಹುಟ್ಟಿಸುವಲ್ಲಿ ಬಹುದೊಡ್ಡ ಹಿನ್ನಡೆಯನ್ನು ಅನುಭವಿಸುತ್ತಿವೆ. ಕೆಲವೊಂದು ಕಡೆಗೆ ಜಾತೀಯ ಸಂಘಟನೆಗಳಾಗಿ ಪರಿವರ್ತನೆಗೊಂಡಿದ್ದು ಕನ್ನಡ ಭಾಷೆಯ ದುರ್ದೈವ.
ಕನ್ನಡದ ಬಾವುಟ ಹಿಡಿದವರು ಯಾರೇ ಇರಲಿ ಅಧೀನ ಘಟಕಗಳನ್ನು ಪ್ರತಿನಿಧಿಸುವವರಿಗೆ ಒಂದಿಷ್ಟು ಕನ್ನಡದ ಕಾರ್ಯ ಚಟುವಟಿಕೆ ನಡೆಸುವಂತೆ ಕಡ್ಡಾಯ ಗುರಿಯನ್ನು ಕಸಾಪ ಅಧ್ಯಕ್ಷರು ನೀಡಬೇಕಾಗಿದೆ. ರಾಜ್ಯಾಧ್ಯಕ್ಷ ಮನು ಬಳಗಾರ ಮತ್ತು ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಈ ಕುರಿತು ಯೋಚಿಸಿ ಕಾರ್ಯೋನ್ಮುಖ ಆಗಬೇಕಾಗಿದೆ.
ಹಿಂದೆ ಕನ್ನಡದ ಸೇವೆಯನ್ನು ಧ್ಯೇಯವಾಗಿರಿಸಿಕೊಂಡು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಬರೀ ಅಂಚೆ ಪತ್ರಗಳ ಮುಖಾಂತರ ಮತ ಬೇಡುವ ಪರಿಪಾಠವಿತ್ತು. ಅಂಚೆ ಪತ್ರ ಬಂತೆಂದರೆ ಸಾಕು ಸಾಹಿತಿಗಳು, ಹೋರಾಟಗಾರರು ಸಂತೋಷ ಪಟ್ಟು ಮತದಾನ ಮಾಡುತ್ತಿದ್ದರು. ಒಂದಿಷ್ಟು ಸಂದರ್ಭಗಳಲ್ಲಿ ಸಾಹಿತ್ಯಾಭಿರುಚಿ, ಸಂಘಟನೆ ಚಾತುರ್ಯ, ಹೋರಾಟದ ಮನೋಭಾವ ಇರುವವರನ್ನು ಹುಡುಕಿ ಅವಿರೋಧ ಆಯ್ಕೆ ಮಾಡಲಾಗುತ್ತಿತ್ತು.
ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದರ ಘಟಕಗಳ ಕಾರ್ಯ ಹಂಚಿಕೆ, ಪದಾಧಿಕಾರಿಗಳ ಆಯ್ಕೆಯ ಸ್ವರೂಪವೇ ಬದಲಾಗಿ ಬಿಟ್ಟದೆ. ಜಿಲ್ಲೆಯಷ್ಟೇ ಅಲ್ಲ ತಾಲೂಕು, ಹೋಬಳಿ ಕಸಾಪ ಘಟಕಗಳ ಅಧ್ಯಕ್ಷರಾಗಲು ಸಾಹಿತ್ಯದ ಗಂಧ ಗಾಳಿಯೂ ಇಲ್ಲದವರು ಪೈಪೋಟಿ, ಜಾತಿ, ಮತ, ಪಂಥ, ಗುಂಪುಗಾರಿಕೆ ನಡೆಸಿ ಹಣ ಖರ್ಚು ಮಾಡಿ ಅಧ್ಯಕ್ಷರಾಗುತ್ತಿರುವದರಿಂದ ಸಾಹಿತ್ಯದ ಕೆಲಸವೇ ಆಗುತ್ತಿಲ್ಲ. ಈಚೆಗೆ ಬೆಳಗಾವಿ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ‘ಅಹಿಂದ’ ವರ್ಗದಿಂದ ಅವಕಾಶ ಕೋರಿ ಚುನಾವಣೆಗೆ ನಿಂತಿದ್ದವರನ್ನು ಹಿಂದೆ ಸರಿಸಿ ಅವಿರೋಧವಾಗಿ ಆಯ್ಕೆಯಾಗಲು ನಡೆಸಿದ ಡ್ರಾಮಾ ನೆನಪಿಸಿದರೆ ಕನ್ನಡ ಕಟ್ಟುವ ನಮ್ಮ ಆಶಯ ಯಾವ ಹಾದಿಯಲ್ಲಿ ಹೊರಟಿದೆ ಎನ್ನುವದು ತಿಳಿಯುತ್ತದೆ. ಮತ್ತೆ ಇದೇ ಕಸಾಪ ರಾಜ್ಯ, ಜಿಲ್ಲಾ ಅಧ್ಯಕ್ಷರುಗಳ ಚುನಾವಣೆ ಇಷ್ಟರಲ್ಲಿಯೇ ಎದುರಾಗಲ್ಲಿದೆ. ಕಸಾಪ ಸದಸ್ಯರು ಸ್ವಲ್ಪ ಯೋಚಿಸಿ ತಮಗೆ ಯಾರು ಹಿತವರು ಎಂದು ಆಯ್ಕೆ ಮಾಡುವ ಮೊದಲು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವದು ಇಂದಿನ ಅವಶ್ಯಕತೆಯಾಗಿದೆ.
