ಕೌಜಲಗಿ:ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ
ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ
ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಮೇ 29 :
ಗೋಕಾಕ ತಾಲೂಕಿನ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯಲ್ಲಿರುವ ಕೌಜಲಗಿ ಪಟ್ಟಣದಲ್ಲಿ ಬುಧವಾರ ಸರ್ಕಾರಿ ಆಂಗ್ಲ ಮಾಧ್ಯಮ ಎಲ್.ಕೆ.ಜಿ. ಮತ್ತು 1ನೇ ತರಗತಿ ಶಾಲೆ ಉದ್ಘಾಟನೆಯಾಯಿತು.
ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಕೌಜಲಗಿ ಜಿ.ಪಂ. ಸದಸ್ಯೆ ಶಕುಂತಲಾ ಅಶೋಕ ಪರುಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿ; ಸ್ಥಳೀಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿಯೇ ಈಗ ತಾತ್ಕಾಲಿಕವಾಗಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲಾಗಿದೆ. ಸಾರ್ವಜನಿಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಪಟ್ಟಣಕ್ಕೆ ಮಂಜೂರಾದ ಆಂಗ್ಲ ಮಾಧ್ಯಮ ಶಾಲೆಯನ್ನು ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕು. ಇಲ್ಲಿ ಪಠ್ಯ ಪುಸ್ತಕ, ಸಮವಸ್ತ್ರಗಳೆಲ್ಲವೂ ಉಚಿತವಾಗಿ ಮಕ್ಕಳಿಗೆ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ನೀಲಪ್ಪ ಕೇವಟಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ಶಾಂತಪ್ಪ ಹಿರೇಮೇತ್ರಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಾದೇವ ಬುದ್ನಿ, ಶಿಕ್ಷಕರಾದ ಮಾಲತೇಶ ಸಣ್ಣಕ್ಕಿ, ಹಳ್ಳೂರ, ಅನ್ನಪೂರ್ಣ ಕೌಜಲಗಿ ಮುಂತಾದವರು ಉಪಸ್ಥಿತರಿದ್ದರು.