ಗೋಕಾಕ:ರಸಗೊಬ್ಬರ ಅಂಗಡಿಗಳಿಗೆ ಕೃಷಿ ಇಲಾಖೆ ಅಧಿಕಾರಿಗಳ ಹಠಾತ್ ಭೇಟಿ
ರಸಗೊಬ್ಬರ ಅಂಗಡಿಗಳಿಗೆ ಕೃಷಿ ಇಲಾಖೆ ಅಧಿಕಾರಿಗಳ ಹಠಾತ್ ಭೇಟಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 20 :
ತಾಲೂಕಿನ ಘಟಪ್ರಭಾದಲ್ಲಿ ಕೃಷಿ ಅಧಿಕಾರಿಗಳ ತಂಡ ಬೀಜ, ಕೀಟನಾಶಕ ಹಾಗೂ ರಸಗೊಬ್ಬರ ಮಳಿಗೆಗಳಿಗೆ ಸೋಮವಾರದಂದು ಹಠಾತ್ ಭೇಟಿ ಪರಿಶೀಲನೆ ನಡೆಸಿದರು. ಸಹಾಯಕ ಕೃಷಿ ನಿರ್ದೇಶಕ ಎಮ್.ಎಮ್.ನದಾಫ ಅವರ ನೇತೃತ್ವದ ಕೃಷಿ ಅಧಿಕಾರಿಗಳ ತಂಡ ಕೃಷಿ ಪರಿಕರ ಬೀಜ, ಕೀಟನಾಶಕ, ರಸಗೊಬ್ಬರ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಮಾರಾಟ ಮಳಿಗೆಗಳಲ್ಲಿರುವ ಕೃಷಿ ಪರಿಕರಗಳನ್ನು ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಎಂಟು ಅಧಿಕಾರಿಗಳನ್ನು ಒಳಗೊಂಡ ಈ ತಂಡ ಘಟಪ್ರಭಾದಲ್ಲಿಯ 14 ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನ್ಯೂನತೆ ಕಂಡು ಬಂದ 10 ರಸಗೊಬ್ಬರ, ಕೀಟನಾಶಕ, ಬೀಜ ಮಾರಾಟ ಮಳಿಗೆಗಳಿಗೆ ನೋಟೀಸ ನೀಡಿ ಏಳು ದಿನಗಳೊಳಗಾಗಿ ಸೂಕ್ತ ಉತ್ತರ ನೀಡದೆ ಇದ್ದಲ್ಲಿ ಮಾರಾಟ ಮಳಿಗೆಯ ಪರವಾನಗಿಯನ್ನು ತಡೆ ಹಿಡಿಯುವುದು ಅಥವಾ ರದ್ದು ಮಾಡಲಾಗುವುದೆಂದು ತಿಳಿಸಿದರು.
ರೈತರಿಗೆ ಸಕಾಲದಲ್ಲಿ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಸರಿಯಾಗಿ ವಿತರಣೆ ಮಾಡಬೇಕೆಂದು ತಿಳಿಸಿದರಲ್ಲದೆ ರೈತರಿಗೆ ಮಾರಾಟ ಮಾಡುವ ಎಲ್ಲ ಪರಿಕರಗಳಿಗೆ ರಶೀದಿ ನೀಡಬೇಕೆಂದು ಎಚ್ಚರಿಕೆ ನೀಡಿದರು.
ತಂಡದಲ್ಲಿ ಕೃಷಿ ಅಧಿಕಾರಿಗಳಾದ ಶ್ರೀಮತಿ ಲೀಲಾ ಕೌಜಗೇರಿ, ಎಸ್. ಬಿ.ಕರಗಣ್ಣಿ, ಸಹಾಯಕ ಕೃಷಿ ಅಧಿಕಾರಿಗಳು ಹಾಗೂ ಆತ್ಮ ಸಿಬ್ಬಂದಿ ಇದ್ದರು.