ಗೋಕಾಕ:ನಮ್ಮ ದೇಶದಲ್ಲಿ ಮತ ಚಲಾವಣೆಗೆ ಬಹಳ ಮಹತ್ವವಿದೆ : ಜೆ.ಎಂ.ನದಾಫ್
ನಮ್ಮ ದೇಶದಲ್ಲಿ ಮತ ಚಲಾವಣೆಗೆ ಬಹಳ ಮಹತ್ವವಿದೆ : ಜೆ.ಎಂ.ನದಾಫ್
ಬೆಟಗೇರಿ ಜ 25 :ಹದಿನೆಂಟು ವಯಸ್ಸು ತುಂಬಿದ ಪ್ರತಿಯೊಬ್ಬರು ಮತದಾನ ಹಕ್ಕು ಹೊಂದಿರುತ್ತಾರೆ. ನಮ್ಮ ದೇಶದಲ್ಲಿ ಮತ ಚಲಾವಣೆಗೆ ಬಹಳ ಮಹತ್ವವಿದೆ. ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಲೆಕ್ಕಾಧಿಕಾರಿ ಜೆ.ಎಂ.ನದಾಫ್ ಹೇಳಿದರು.
ಗ್ರಾಮದ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಶುಕ್ರವಾರ ಜ.25 ರಂದು ಆಯೋಜಿಸಿದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ನಮ್ಮ ದೇಶದ ಸಂವಿಧಾನ ಶ್ರೇಷ್ಠವಾಗಿದೆ. ಮತದಾರ ಪಟ್ಟಿಯಲ್ಲಿ ದಾಖಲಾಗದವರು ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ವರ್ಗಾವಣೆ, ಲೋಪ-ದೋಷಗಳಿದ್ದರೆ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಮತದಾನದ ದಿನದಂದು ತಪ್ಪದೇ ಎಲ್ಲರೂ ಮತ ಚಲಾಯಿಸಬೇಕೆಂದರು.
ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗಿರುವ ಹಕ್ಕು, ಮತದಾನ ಮಹತ್ವ, ಸಂವಿದಾನದ ಶ್ರೇಷ್ಠತೆ ಬಗ್ಗೆ ತಿಳಿಸಿದರು. ಹಲವು ಜನ ಗಣ್ಯರು, ಸ್ಥಳೀಯರು ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಹಿರಿಯ ಪತ್ರಕರ್ತ ಬಸವರಾಜ ಕುರೇರ, ಮಲ್ಲಪ್ಪ ಪಣದಿ, ಸುರೇಶ ಬಾಣಸಿ, ಹನುಮಂತ ವಡೇರ, ಬೀರಪ್ಪ ಕುರಬೇಟ, ಶಿವಪ್ಪ ದೇಯಣ್ಣವರ, ರುದ್ರಪ್ಪ ಕಾಡವ್ವಗೋಳ, ರಂಗಪ್ಪ ಕೋಣಿ, ಗ್ರಾಪಂ ಸದಸ್ಯರು, ಸಿಬ್ಬಂದಿ, ಸ್ಥಳೀಯರು, ಇತರರು ಇದ್ದರು.