RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಕರ್ನಾಟಕ ದರ್ಶನ ಪ್ರವಾಸಕ್ಕೆ ಗಣ್ಯರಿಂದ ಚಾಲನೆ

ಗೋಕಾಕ:ಕರ್ನಾಟಕ ದರ್ಶನ ಪ್ರವಾಸಕ್ಕೆ ಗಣ್ಯರಿಂದ ಚಾಲನೆ 

ಕರ್ನಾಟಕ ದರ್ಶನ ಪ್ರವಾಸಕ್ಕೆ ಗಣ್ಯರಿಂದ ಚಾಲನೆ

ಗೋಕಾಕ ಜ 18 : ಮೂಡಲಗಿ ಶೈಕ್ಷಣಿಕ ವಲಯದ ಪ್ರೌಢ ಶಾಲಾ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಗಣ್ಯರಿಂದ ಚಾಲನೆ ನೀಡಲಾಯಿತು.
8ನೇ ವರ್ಗದ 34 ಸರ್ಕಾರಿ ಪ್ರೌಢ ಶಾಲೆಗಳ ಒಟ್ಟು 100 ವಿದ್ಯಾರ್ಥಿಗಳನ್ನೊಳಗೊಂಡ ಕರ್ನಾಟಕ ದರ್ಶನ ಪ್ರವಾಸಕ್ಕೆ ನಗರದ ಹೊರವಲಯದಲ್ಲಿರುವ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶುಕ್ರವಾರದಂದು ಬಸ್ಸುಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಗಣ್ಯರು ಚಾಲನೆ ನೀಡಿದರು.
ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಿ ಮಾತನಾಡಿದ ಚಿಕ್ಕೋಡಿ ಡಿಡಿಪಿಐ ಎಂ.ಜಿ. ದಾಸರ ಅವರು, ದೇಶ ಸುತ್ತಿದಾಗಿನ ಅನುಭವ ಕೋಶ ಓದುವುದರಿಂದ ಸಿಗುವುದಿಲ್ಲ. ಅಂತೆಯೇ ಕೋಶ ಓದುವಾಗಿನ ಅನುಭವ ದೇಶ ಸುತ್ತುವುದರಿಂದ ಸಿಗುವುದಿಲ್ಲ. ಇವೆರಡು ಕಾರ್ಯಗಳು ನಿರಂತರವಾಗಿ ನಡೆದರೆ ಮಾತ್ರ ಓದಿನ ಪೂರ್ಣ ಫಲ ಹಾಗೂ ಪ್ರವಾಸದ ಅನುಭವ ವಿದ್ಯಾರ್ಥಿಗಳಿಗೆ ದೊರೆಯುತ್ತದೆ ಎಂದು ಹೇಳಿದರು.
ಪ್ರವಾಸದಿಂದ ಅಲ್ಲಿನ ಪರಸರ, ಜನಜೀವನ, ಸಾಮಾಜಿಕ-ಆರ್ಥಿಕ-ಧಾರ್ಮಿಕತೆ ಜನಜೀವನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವಾಗುತ್ತದೆ. ಅಲ್ಲದೇ ಅಲ್ಲಿನ ಇತಿಹಾಸ ವೈಶಿಷ್ಟ್ಯಗಳನ್ನು ಅಧ್ಯಯನ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಅಂತಹ ವಿನೂತನ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಹೆಚ್ಚೆಚ್ಚು ಜ್ಞಾನಾರ್ಜನೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು. ಹಣ, ಅಂತಸ್ತು, ಐಶ್ವರ್ಯ ಇದ್ದರೆ ಶ್ರೀಮಂತರಲ್ಲ. ಯಾರು ಗುಡಿಸಿಲಿನಲ್ಲಿ ವಾಸವಿದ್ದು ಶಿಕ್ಷಣದಲ್ಲಿ ಅದ್ವಿತೀಯ ಸಾಧನೆಗೈಯ್ಯುತ್ತಾರೆಯೋ ಅವರೇ ನಿಜವಾದ ಶ್ರೀಮಂತರೆಂದು ದಾಸರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ಶಶಿಕಲಾ ಸಣ್ಣಕ್ಕಿ, ಶಕುಂತಲಾ ಪರುಶೆಟ್ಟಿ, ರಾಜಾಪೂರ ಪಿಕೆಪಿಎಸ್ ಅಧ್ಯಕ್ಷ ಬಸವಂತ ಕಮತಿ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ಜಿಪಂ ಮಾಜಿ ಸದಸ್ಯ ಸುಧೀರ ಜೋಡಟ್ಟಿ, ಯುವ ಧುರೀಣ ನಾಗಪ್ಪ ಶೇಖರಗೋಳ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎ.ಬಿ. ಮಲಬನ್ನವರ, ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಲಕ್ಷ್ಮಣ ಬಡಕಲ್, ಎಂ.ಜಿ. ಮಾವಿನಗಿಡದ, ಶಿಕ್ಷಣ ಸಂಯೋಜಕರು, ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು, ಪಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೂಡಲಗಿ ಬಿಇಓ ಅಜೀತ ಮನ್ನಿಕೇರಿ ಅವರು, ಮೂಡಲಗಿ ಶೈಕ್ಷಣಿಕ ವಲಯದ ಮಹತ್ತರ ಬೆಳವಣಿಗೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕೊಡುಗೆ ಅನನ್ಯವಾಗಿದೆ. ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಮೂಡಲಗಿ ವಲಯವನ್ನು ರಾಜ್ಯಮಟ್ಟದಲ್ಲಿ ಗುರುತಿಸಿ ಪೋಷಿಸುತ್ತಿರುವ ಶಾಸಕರ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ದರ್ಶನ ಪ್ರವಾಸವನ್ನು ಮೂಡಲಗಿ ವಲಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ. ಇಂದಿನಿಂದ ನಾಲ್ಕು ದಿನಗಳವರೆಗೆ ಧಾರವಾಡ, ಮುಂಡಗೋಡ, ಶಿರಸಿ, ಇಡಗುಂಜಿ, ಮುರ್ಡೆಶ್ವರ, ಕೊಲ್ಲೂರು, ಉಡುಪಿ, ಕಾರ್ಕಳ, ಧರ್ಮಸ್ಥಳ, ಹೊರನಾಡು, ಶೃಂಗೇರಿ, ಶಿವಮೊಗ್ಗಕ್ಕೆ ಪ್ರವಾಸ ಹೊರಡಲಿದೆ. ಎಸ್‍ಸಿ,ಎಸ್‍ಟಿ ಹಾಗೂ ಇತರೇ ಓಬಿಸಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 3.50 ಲಕ್ಷ ರೂ. ಅನುದಾನ ಬಂದಿದೆ ಎಂದು ಮನ್ನಿಕೇರಿ ವಿವರಿಸಿದರು.
ಫೋಟೋ ಕ್ಯಾಪ್ಷನ್ : ಗೋಕಾಕ 1 : ಮೂಡಲಗಿ ವಲಯದ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿಂದು ಗಣ್ಯರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

Related posts: