ಗೋಕಾಕ:ಮಗುವನ್ನು ಸುಶಿಕ್ಷಿತರನ್ನಾಗಿಸಲು ಪ್ರತಿಯೊಬ್ಬ ಪಾಲಕರು ಪ್ರಯತ್ನಿಸಿ : ಆರ್.ಬಿ.ಬೆಟಗೇರಿ

ಮಗುವನ್ನು ಸುಶಿಕ್ಷಿತರನ್ನಾಗಿಸಲು ಪ್ರತಿಯೊಬ್ಬ ಪಾಲಕರು ಪ್ರಯತ್ನಿಸಿ : ಆರ್.ಬಿ.ಬೆಟಗೇರಿ
ಬೆಟಗೇರಿ.ಜೂ 13 : ಚಿಕ್ಕ ವಯಸ್ಸಿನ ಮಕ್ಕಳನ್ನು ಕೂಲಿ, ನಾಲಿ ಮಾಡಲು ಕಳುಹಿಸಬೇಡಿ, ಮಗುವಿನ ಭವಿಷ್ಯ ಹಾಳು ಮಾಡಬೇಡಿ, ಪ್ರತಿ ಮಗುವನ್ನು ಸುಶಿಕ್ಷಿತರನ್ನಾಗಿಸಲು ಮಗುವಿನ ಪ್ರತಿಯೊಬ್ಬ ಪಾಲಕರು ಪ್ರಯತ್ನಿಸಬೇಕೆಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಆರ್.ಬಿ.ಬೆಟಗೇರಿ ಹೇಳಿದರು.
ಮೂಡಲಗಿ ಕೇಂದ್ರ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಕೌಜಲಗಿ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನ ಸಭಾಂಗಣದಲ್ಲಿ ಮಂಗಳವಾರ ಜೂ.12 ರಂದು ನಡೆದ ವಿಶ್ವ ಬಾಲ ಕಾರ್ಮಿಕ ವಿರುದ್ಧ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ಶಿಕ್ಷಣ ಪಡೆಯುವುದು ಪ್ರತಿ ಮಗುವಿನ ಹಕ್ಕಾಗಿರುತ್ತದೆ. ತಮ್ಮ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಮಗುವನ್ನು ಬಾಲ ಕಾರ್ಮಿಕರನ್ನಾಗಿಸಿದರೆ ಕಾನೂನು ಪ್ರಕಾರ ಕಠಿಣ ಶಿಕ್ಷೆಗೆಗೊಳಗಾಗಬೇಕಾಗುತ್ತದೆ ಎಂದು ಪಾಲಕರಿಗೆ ಸಲಹೆ ನೀಡಿದರು.
ಕೌಜಲಗಿ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಸುಜಾತಾ ಗುಡಿಮನಿ ಬಾಲ ಕಾರ್ಮಿಕ ಮಕ್ಕಳ ಬದುಕಿನ ದುಸ್ಥಿತಿ, ಶಿಕ್ಷಣದಿಂದ ವಂಚಿತರಾದ ಮಕ್ಕಳ ಹಾಗೂ ಪ್ರತಿ ಮಗುವಿನ ಶಿಕ್ಷಣಕ್ಕೆ ಸರ್ಕಾರದಿಂದ ದೊರಕುವ ವಿವಿಧ ಸಹಾಯ, ಸೌಲಭ್ಯಗಳ ಕುರಿತು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ಥಳೀಯ ಆದಿಶಕ್ತಿ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ನಾಗಮ್ಮ ನಾಯ್ಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯ ಆದಿಶಕ್ತಿ ಜ್ಞಾನ ವಿಕಾಸ ಕೇಂದ್ರದ ಮಹಿಳಾ ಸದಸ್ಯರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಪದಾಧಿಕಾರಿಗಳು, ಸೇರಿದಂತೆ ಗ್ರಾಮದ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗ, ಸ್ಥಳೀಯ ಗಣ್ಯರು, ಮಹಿಳೆಯರು, ಗ್ರಾಮಸ್ಥರು ಇದ್ದರು.
ಸೇವಾ ಪ್ರತಿನಿಧಿ ಭಾರತಿ ಗುದಗನ್ನವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಹಾದೇವಿ ತೋಟಗಿ ಕೊನೆಗೆ ವಂದಿಸಿದರು.