ಖಾನಾಪುರ:ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ನಾಗರಗಾಳಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ
ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ನಾಗರಗಾಳಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ
ವಿಶೇಷ ವರದಿ
ಖಾನಾಪುರ ಡಿ 31: ಎನ್ ನಮ್ದ ಜೀವನಾರೀ, ನಾವ್ ಜಂಗಲ್ ಬಾಜು ಇರೋ ಮಂದಿರೀ, ಯಾಕಾದ್ರ ದೇವ್ರ ನಮ್ಗ ಜಮೀನ ಮ್ಯಾಗ ಹುಟ್ಟಸ್ಯಾನ್ರೀ, ಇರೋ ಚೋಟ್ ಜಗ್ದಾಗ ಎನ್ರ ಪಿಕ ತಗದ ಜೀವನ ನಡೆಸಬೇ ಅಂದ್ರ, ಇವ್ ನಮ್ಮನ್ನ ಬಿಡವಾಲ್ರಿ. ಪರತಿ ವರಸ ನಮ್ದ ಹೋಲಗೋಳ್ದಾಗ ಪಿಕ ಹಾಕಿದ ಮ್ಯಾಗಿಂದ ಹಿಡಿದ ನವೆಂಬರ್ ಬರೋಮಟಾ ಆರಾಮ ಇರತೆವ್ರೀ, ಆದ್ರ ನವೆಂಬರ್ ನಂತ್ರ ನಮ್ದ ಹೋಲಗೋಳ್ದಾಗ ಬಂದ ಜರಾ ಅಡ್ಯಾಡ್ರೀ, ಎನ್ ಆಗಾತೇತಿ ನಮ್ದ ಬಾಳೇ ಜರಾ ಗೊತ್ತಾಗತೇತ್ರೀ, ಯಾಕಂದ್ರ ಎಕರೆ ಗಟ್ಟಲೆ ಬೆಳೆ ನಾಶ ಆಗಾಕತಾವ್ರಿ. ಇದಕ್ಕ ಮುಂದ ಪರಿಹಾರ ಯಾನಂತ ತಿಳಿವಾತ್ರಿ.
ಈ ಕಥೆ ನಡೆಯುತ್ತಿರುವುದು ಬೇರೆಲ್ಲೂ ಅಲ್ಲ, ಇದು ನಡೆಯುತ್ತಿರುವುದು ಖಾನಾಪೂರ ತಾಲೂಕಿನ ಗೋಲಿಹಳ್ಳಿ ಮತ್ತು ನಾಗರಗಾಳಿ ಅರಣ್ಯ ವಲಯ ಪ್ರದೇಶದಲ್ಲಿ ಬರುವ ಗೊಧೊಳ್ಳಿ, ಗೋಧಗೇರಿ, ತಾವರಗಟ್ಟಿ, ಬಾಳಗುಂದ, ಚುಂಚವಾಡ, ಗುಂಡೋಳ್ಳಿ, ಲಿಂಗನಮಠ, ಕಕ್ಕೇರಿ, ಭೂರಣಕಿ, ನಾಗರಗಾಳಿ, ಮಾಸ್ಕೇನಟ್ಟಿ, ಘಸ್ಟೋಳ್ಳಿ ಇನ್ನೂ ಹಲವಾರು ಗ್ರಾಮಗಳಲ್ಲಿ ಬರುವ ಅರಣ್ಯ ಪ್ರದೇಶದ ಸುತ್ತಲೂ ಇರುವ ರೈತರ ಹೊಲ-ಗದ್ದೆಗಳಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿಯಿಂದ ಹೈರಾಣಾದ ರೈತರು.
ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ:
ಕಾಡಿನಲ್ಲಿ ತಿನ್ನಲು ಆಹಾರ ಹಾಗೂ ಕುಡಿಯುವ ನೀರು ಇಲ್ಲದ್ದರಿಂದ, ರೈತರ ಗದ್ದೆಗಳಲ್ಲಿ ಬೆಳೆದು ನಿಂತ ಪೈರುಗಳನ್ನು ತಿಂದು, ಬೆಳೆಗಳಲ್ಲಿ ಒಡಾಡಿ, ಬೆಳೆಯನ್ನು ನಾಶ ಮಾಡುವ ಚಿಂತೆ ಇವರನ್ನು ಇನ್ನಷ್ಟು ಹೈರಾಣಗೊಳಿಸಿದೆ. ಜೋತೆಗೆ ಬೆಳೆಯನ್ನು ತಿನ್ನುವುದಕ್ಕಿಂತ ಹೆಚ್ಚು ಹಾಳು ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿವೆ. ಇದು ಗೊಧೊಳ್ಳಿ, ಗೋಧಗೇರಿ, ತಾವರಗಟ್ಟಿ, ಬಾಳಗುಂದ, ಚುಂಚವಾಡ, ಗುಂಡೋಳ್ಳಿ, ಲಿಂಗನಮಠ, ಕಕ್ಕೇರಿ, ಭೂರಣಕಿ, ನಾಗರಗಾಳಿ, ಮಾಸ್ಕೇನಟ್ಟಿ, ಘಸ್ಟೋಳ್ಳಿ ಇನ್ನೂ ಹಲವಾರು ಗ್ರಾಮಗಳ ಸುತ್ತಲೂ ಇರುವ ಅರಣ್ಯ ಪ್ರದೇಶದಲ್ಲಿನ ಜನರು ಪೈರುಗಳು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ತೊಳಲಾಡುತ್ತಿದ್ದಾರೆ.
ಇನ್ನೆಷ್ಟು ದಿನ ಈ ನರಕ: ಕಳೆದ ಹಲವಾರು ವರ್ಷಗಳಿಂದ ರೈತರ ನಿದ್ದೆಗೆಡಿಸುತ್ತಿರುವ ಕಾಡಾನೆಗಳು ಈಗ ಕಾಡಿನ ಸುತ್ತಲೂ ಇರುವ ಹೊಲ-ಗದ್ದೆಗಳಲ್ಲಿ ಬೆಳೆಯು ಬಂದಿರುವುದರಿಂದ, ನಿತ್ಯ ಒಡಾಡುವ ಜನರ ಸಂಪರ್ಕ ಕಡಿಮೆ ಆಗಿದೆ. ಆದ್ದರಿಂದ ಸಂಜೆ ಆಗುತ್ತಲೆ ರೈತರು ಮನೆ ಕಡೆ ಹೋದಾಗ ಗದ್ದೆಗಳಲ್ಲಿ ಕಾಡಾನೆಗಳು ತಂಡೋಪತಂಡವಾಗಿ ಕಂಡುಬರುತ್ತಿವೆ. ಹೀಗೆ ಬೇಟೆ ಮುಂದುವರಿದರೆ ಕಾಡಾನೆಗಳ ಹಾವಳಿಗೆ ಕೊನೆ ಎಂದು..? ಎಂಬುದು ಜನರ ಯಕ್ಷ ಪ್ರಶ್ನೇಯಾಗಿದೆ.
ನಾಮ್ ಕೆ ವಾಸ್ತೆ ಸೋಲಾರ ತಂತಿ ಬೇಲಿ:
ಗುಂಡೊಳ್ಳಿ ವ್ಯಾಪ್ತಿಯ ಅರಣ್ಯದ ಸುತ್ತಲೂ ಸುಮಾರು 250 ಕ್ಕೂ ಅಧಿಕ ಎಕರೆ ಕೃಷಿ ಭೂಮಿ ಇದ್ದು, ಇದರ ಸುತ್ತಲೂ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಸೋಲಾರ್ ತಂತಿಯನ್ನು ಅರಣ್ಯ ಇಲಾಖೆಯವರು ಅಳವಡಿಸಿದ್ದಾರೆ. ಆದರೆ ಈ ಸೋಲಾರ ತಂತಿ ಬೇಲಿ ನಾಮ್ ಕೆ ವಾಸ್ತೆ ಎಂಬಂತಾಗಿದೆ. ಕಳೆದ 6 ತಿಂಗಳಿನಿಂದ ಈ ಸೋಲಾರ ತಂತಿ ಕಾರ್ಯ ನಿರ್ವಹಿಸುತ್ತಿಲ್ಲ, ಹೀಗಾಗಿರುವುದರಿಂದ ಕಾಡಿನಿಂದ ರಾಜಾರೋಷವಾಗಿ ಕಾಡುಪ್ರಾಣಿಗಳು ರೈತರ ಗದ್ದೆಗಳತ್ತ ಮುಖಮಾಡಿವೆ.
ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಕೊನೆ ಎಂದು..??: ರೈತರು ತಮ್ಮ ತಮ್ಮ ಹೊಲ-ಗದ್ದೆಗಳಲ್ಲಿ ಪ್ರತಿವರ್ಷ ಬೆಳೆಯುವುದು ಒಂದೇ ಬೆಳೆ, ಅದೂ ಸಹ ಕೈ ಬಂದ ತುತ್ತು, ಬಾಯಿಗೆ ಬರುತ್ತಿಲ್ಲ ಎಂಬ ಸ್ಥಿತಿ ರೈತನಿಗೆ ಚಿಂತಡಗಿಡುಮಾಡಿದೆ. ಅದಕ್ಕಾಗಿ ಪ್ರತಿವರ್ಷ ಎಲ್ಲ ಕಾಡುಪ್ರಾಣಿಗಳಿಂದ ಬೆಳೆ ನಾಶವಾಗಲೂ ಕಾರಣ “ಅರಣ್ಯ ಇಲಾಖೆಯವರ ನಿರ್ಲಕ್ಷ್ಯವೇ” ಎನ್ನುತ್ತಾರೆ ರೈತರು. ಏಕೆಂದರೆ ಕಾಡುಪ್ರಾಣಿಗಳಿಂದ ಪ್ರತಿವರ್ಷ ಇಷ್ಟೆಲ್ಲಾ ಬೆಳೆನಾಶ ಆಗುತ್ತಿದ್ದರೂ ಅರಣ್ಯ ಇಲಾಖೆಯವರು “ಬೇರೆಯವರ ಚಿಂತೆ ನಮಗ್ಯಾಕೆ” ಎನ್ನುವ ಹಾಗೇ ಕಣ್ಣುಮುಚ್ಚಿ ಕುಳಿತ್ತಿದ್ದಾರೆ ಎನ್ನುತ್ತಾರೆ ನಮ್ಮ ರೈತರು. ಹೀಗಾದರೇ ಈ ಬಹುದೊಡ್ಡ ಭೂತಕ್ಕೆ ಕೊನೆ ಎಂದು..?
ಪ್ರಕಾಶ ಮರೆಪ್ಪನ್ನವರ, ಉಪವಲಯ ಅರಣ್ಯ ಅಧಿಕಾರಿಗಳು ಗೊಧೋಳ್ಳಿ ನಾಕಾ
“ಪ್ರಾಣಿಗಳ ಹಾವಳಿ ತಡೆಗಟ್ಟಲು ಗುಂಡೊಳ್ಳಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸೋಲಾರ ನಿರ್ಮಿತ ತಂತಿಬೇಲಿಯನ್ನು ಅಳವಡಿಸಿದ್ದೆವೆ. ಆದರೆ ಕೆಡಿಗೆಡಿಗಳು ಕೆಲವು ಕಡೆಗಳಲ್ಲಿ ತಂತಿಯನ್ನು ಕಟ್ಟಮಾಡಿ ಕಳುವು ಮಾಡುತ್ತಿದ್ದಾರೆ ಅದಕ್ಕೆ ಎಲ್ಲರೂ ಸಹಕಾರನೀಡಬೇಕು ಅಂದಾಗ ಮಾತ್ರ ಕಾಡುಪ್ರಾಣಿಗಳು ರೈತರ ಹೊಲಗಳತ್ತ ಮುಖ ಮಾಡುವುದಿಲ್ಲ.”