RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಕೌಜಲಗಿಗೆ ಗ್ರಾ.ಪಂ ಗೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಲಭಿಸಿರುವುದು ಸಂತಸ ತಂದಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ಕೌಜಲಗಿಗೆ ಗ್ರಾ.ಪಂ ಗೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಲಭಿಸಿರುವುದು ಸಂತಸ ತಂದಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ 

ಕೌಜಲಗಿಗೆ ಗ್ರಾ.ಪಂ ಗೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಲಭಿಸಿರುವುದು ಸಂತಸ ತಂದಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ ಡಿ 25: ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಮೊದಲ ಹಾಗೂ ದೇಶಕ್ಕೆ 5ನೇ ಸ್ಥಾನ ಪಡೆದಿರುವ ಕೌಜಲಗಿ ಗ್ರಾಮ ಪಂಚಾಯತಿ ಸಮೀತಿಯವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಭಾನುವಾರ ಸಂಜೆ ಜರುಗಿದ ಸರಳ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಕೌಜಲಗಿಗೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಲಭಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ದೇಶದ ಅತ್ಯುತ್ತಮ ಗ್ರಾಮಗಳ ಪಟ್ಟಿ ಬಿಡುಗಡೆ ಮಾಡಿದ್ದು ಅದರಲ್ಲಿ ಕೌಜಲಗಿ ಗ್ರಾಮ ಪಂಚಾಯತಿಯು 87 ಅಂಕ ಪಡೆದು ದೇಶದಲ್ಲಿಯೇ 5ನೇ ಸ್ಥಾನ ಲಭಿಸಿದೆ. ಒಟ್ಟಾರೆ 20 ರ್ಯಾಂಕ್ ಪಟ್ಟಿಯಲ್ಲಿ 45 ಗ್ರಾಮಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಕೌಜಲಗಿ ಗ್ರಾಮವು ಹೆಮ್ಮೆಯ ಸಾಧನೆ ಮಾಡುವ ಮೂಲಕ ಅರಭಾವಿ ಮತಕ್ಷೇತ್ರದ ಹಿರಿಮೆ ಹೆಚ್ಚಿಸಿದೆ ಎಂದು ಹೇಳಿದರು.
ಪ್ರಾಥಮಿಕ ಮಾನದಂಡಗಳು, ಪ್ರಮುಖ ಮೂಲ ಸೌಕರ್ಯ, ಆರ್ಥಿಕಾಭಿವೃದ್ಧಿ ಮತ್ತು ಜೀವನಾಧಾರ, ಆರೋಗ್ಯ, ಪೌಷ್ಠಿಕಾಂಶ ಮತ್ತು ನೌರ್ಮಲೀಕರಣ, ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಒಳಗೊಳ್ಳುವಿಕೆ ಮೌಲ್ಯಮಾಪನ ಮಾಡಿ ಕೌಜಲಗಿಯನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಅವರು, ಕೌಜಲಗಿಗೆ ಪ್ರಶಸ್ತಿ ದೊರೆತಿರುವುದು ಇಡೀ ಗ್ರಾಮ ಸಂತಸಪಡುತ್ತಿದೆ. ಕೌಜಲಗಿಯಲ್ಲಿ ನಡೆದಿರುವ ಅಭಿವೃದ್ಧಿಪರ ಕಾಮಗಾರಿಗಳೇ ಈ ಪ್ರಶಸ್ತಿ ದೊರೆಯಲಿಕ್ಕೆ ಕಾರಣವಾಗಿದೆ. ಹಿಂದೆಯೂ ಗಾಂಧಿ ಪುರಸ್ಕಾರ ಪ್ರಶಸ್ತಿಗೆ ಕೌಜಲಗಿ ಗ್ರಾಮ ಪಂಚಾಯತಿ ಭಾಜನವಾಗಿತ್ತು. ಆದರೂ ಕೆಲವರಿಗೆ ಅರಗಿಸಿಕೊಳ್ಳಲು ಶಕ್ತಿ ಬರುತ್ತಿಲ್ಲ. ಅಸೂಯೆ, ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಮುಖಂಡರೊಬ್ಬರ ಆರೋಪವನ್ನು ತಳ್ಳಿಹಾಕಿದ ಅವರು, ನರೇಗಾ ಯೋಜನೆಯಡಿ ಕೆಲವು ಕಾಮಗಾರಿಗಳು ಕಳಪೆಯಾಗಿರಬಹುದು. ಆದರೆ ವಸತಿ ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಬಗ್ಗೆ ತನಿಖೆ ನಡೆದರೂ ಯಾವುದೇ ತನಿಖೆಗೂ ಸಿದ್ಧರಿದ್ದೇವೆಂದು ಸ್ಪಷ್ಟಪಡಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಮೂಡಲಗಿ ತಾಲೂಕು ಕೇಂದ್ರವಾಗಿದೆ. ಕಲ್ಮಡ್ಡಿ ಯಾತ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದ ಫಲವೇ ಹೊರತು ಯಾರದೂ ಅಲ್ಲ. ಮುಂದಿನ ದಿನಗಳಲ್ಲಿ ಕೌಜಲಗಿ ತಾಲೂಕು ಕೇಂದ್ರವಾದರೆ ಅದೂ ಸಹ ಶಾಸಕರ ಪರಿಶ್ರಮದಿಂದವೇ ಹೊರತು ಯಾವ ಸ್ವಯಂ ಘೋಷಿತ ವ್ಯಕ್ತಿಗಳದ್ದಲ್ಲವೆಂದು ಪರೋಕ್ಷವಾಗಿ ಜೆಡಿಯು ಮುಖಂಡರೊಬ್ಬರನ್ನು ಕುಟುಕಿದರು.
ಗ್ರಾಪಂ ಅಧ್ಯಕ್ಷ ರಾಯಪ್ಪ ಬಳೋಲದಾರ, ಎಂಇಎಸ್ ಅಧ್ಯಕ್ಷ ಎ.ಎ. ಪರುಶೆಟ್ಟಿ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರಾದ ಮಹಾದೇವಪ್ಪ ಭೋವಿ, ಅಶೋಕ ಉದ್ದಪ್ಪನವರ, ತಾಪಂ ಸದಸ್ಯ ಶಾಂತಪ್ಪ ಹಿರೇಮೇತ್ರಿ, ರಮ್ಜಾನ್ ಮುಲ್ತಾನಿ, ಎಸ್.ಬಿ. ಲೋಕನ್ನವರ, ಸುಭಾಸ ಕೌಜಲಗಿ, ನೀಲಪ್ಪ ಕೇವಟಿ, ಶ್ರೀಶೈಲ ಗಾಣಿಗೇರ, ಡಿ.ಜೆ. ಮುಲ್ತಾನಿ, ಗ್ರಾಪಂ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts: