ಗೋಕಾಕ:22 ರೈತರ ಆತ್ಮಹತ್ಯೆ ಪ್ರಕರಣಗಳಿಗೆ 82 ಲಕ್ಷ ರೂ ಪರಿಹಾರ ಮೊತ್ತ ವಿತರಣೆ : ಶಾಸಕ ಬಾಲಚಂದ್ರ ಹೇಳಿಕೆ
22 ರೈತರ ಆತ್ಮಹತ್ಯೆ ಪ್ರಕರಣಗಳಿಗೆ 82 ಲಕ್ಷ ರೂ ಪರಿಹಾರ ಮೊತ್ತ ವಿತರಣೆ : ಶಾಸಕ ಬಾಲಚಂದ್ರ
ಗೋಕಾಕ ನ 8: ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಸಾಮಥ್ರ್ಯ ರೈತರಿಗಿರಬೇಕು. ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಯಂತಹ ಪಾಪದ ಕೆಲಸಕ್ಕೆ ಕೈ ಹಾಕಬಾರದು. ಇದರಿಂದ ಕುಟುಂಬ ಬೀದಿಗೆ ಬರುತ್ತದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆತಂಕ ವ್ಯಕ್ತಪಡಿಸಿದರು.
ಬುಧವಾರ ಸಂಜೆ ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಚೆಕ್‍ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಆತ್ಮಹತ್ಯೆ ಮಹಾಪಾಪ. ಏನೇ ಕಷ್ಟಗಳು ಬರಲಿ. ಅವುಗಳನ್ನು ಮೆಟ್ಟಿನಿಂತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಾಲ ಸೂಲ ಮಾಡಿ ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ನಡೆಯುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದರು. ಸರ್ಕಾರ ರೈತರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ಆಗ್ರಹಿಸಿದರು.
2013 ರಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ 22 ಜನ ರೈತರು ಸಾಲಧ ಬಾಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಎಲ್ಲ ರೈತ ಕುಟುಂಬಗಳ ವಾರಸುದಾರರಿಗೆ ಸರ್ಕಾರದ ಪರಿಹಾರ ಧನವನ್ನು ವಿತರಿಸಲಾಗಿದೆ. ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಸೌಲಭ್ಯ ಮಂಜೂರು ಮಾಡಲಾಗಿದೆ. ಪ್ರತಿ ತಿಂಗಳು 2 ಸಾವಿರ ರೂ. ವಿಧವಾ ವೇತನ ದೊರೆಯಲಿದೆ. ಮೃತ ರೈತರ ಕುಟುಂಬಗಳಿಗೆ ಆರೋಗ್ಯ ಸೇವೆ ಉಚಿತವಾಗಿ ಸಿಗಲಿದೆ. ಮೃತರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ದೊರೆಯಲಿದೆ ಎಂದು ಅವರು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಇದೇ ಸಂದರ್ಭದಲ್ಲಿ ಸಾಲದ ಬಾಧೆಯಿಂದ ವಿಷ ಸೇವಿಸಿ ಕಳೆದ ಜೂ.13 ರಂದು ಆತ್ಮಹತ್ಯೆ ಮಾಡಿಕೊಂಡ ಕಲ್ಲೋಳಿಯ ಪ್ರಕಾಶ ಸತ್ತೆಪ್ಪ ಆಡಿನ (32) ಹಾಗೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಅರಭಾವಿಯ ಪ್ರಭಾಕರ ಚನ್ನಪ್ಪ ಬಡಲಕ್ಕನವರ ಅವರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಚೆಕ್‍ಗಳನ್ನು ವಿತರಿಸಿದರು.
ಅರಭಾವಿ ಜಿಪಂ ಮಾಜಿ ಸದಸ್ಯ ಶಂಕರ ಬಿಲಕುಂದಿ, ಪ್ರಭು ಕಡಾಡಿ, ಅಜೀಜ ಡಾಂಗೆ, ಬಿ.ಡಿ.ಪಾಟೀಲ, ಭೀಮಶಿ ಅಂತರಗಟ್ಟಿ, ಸಹಾಯಕ ಕೃಷಿ ನಿರ್ದೇಶಕ ಎ.ಡಿ. ಸವದತ್ತಿ, ಕೃಷಿ ಅಧಿಕಾರಿ ಎಂ.ಎಂ.ನದಾಫ, ಮುಂತಾದವರು ಉಪಸ್ಥಿತರಿದ್ದರು.