ಗೋಕಾಕ:ಪ್ರತಿ ಟನ್ ಗೆ 3,100 ರೂ: ರಾಜ್ಯದಲ್ಲೇ ದಾಖಲೆ ದರ ಘೋಷಿಸಿದ ಸತೀಶ್ ಶುರ್ಗಸ್
ಪ್ರತಿ ಟನ್ ಗೆ 3,100 ರೂ: ರಾಜ್ಯದಲ್ಲೇ ದಾಖಲೆ ದರ ಘೋಷಿಸಿದ ಸತೀಶ್ ಶುರ್ಗಸ್
ಗೋಕಾಕ ನ 6: ರೈತರ ಮಹದಾಶೆಯಂತೆ ಎರಡನೇ ಕಂತನ್ನು ಪ್ರತಿ ಟನ್‍ಗೆ 300 ರೂಪಾಯಿಯಂತೆ ಘೋಷಿಸಲು ಸೋಮವಾರ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸತೀಶ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ವಾಡೆನ್ನವರ ತಿಳಿಸಿದ್ದಾರೆ
ಈ ಕುರಿತು ಸೋಮವಾರದಂದು ಕಾರ್ಖಾನೆ ಆವರಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಹಂಗಾಮಿನಲ್ಲಿ ಕಾರ್ಖಾನೆಗೆ ಪೂರೈಸಿದ 671, 92005, 94012 ಕಬ್ಬು ತಳಿಗಳಿಗೆ ಪ್ರತಿ ಟನ್ ಗೆ 3,100 ರೂಪಾಯಿ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿಯೇ ಇದು ಅತೀ ಹೆಚ್ಚಿನ ದರವಾಗಿದೆ. ಇನ್ನುಳಿದ ಕಬ್ಬು ತಳಿಗಳಿಗೆ ಪ್ರತಿ ಟನ್‍ಗೆ 3000ದಂತೆ ಪಾವತಿಸಲಾಗುತ್ತಿದೆ . ಸತೀಶ ಶುಗರ್ಸ್ ಕಾರ್ಖಾನೆಗೆ 2016-17 ಹಂಗಾಮಿನಲ್ಲಿ ರೈತರಿಗೆ ಕಬ್ಬು ಪೂರೈಸಿದ ತಕ್ಷಣವೇ ಖಾತೆಗಳಿಗೆ ಹಣ ಪಾವತಿಸಲಾಗಿದೆ.
ಸಿಒಸಿ 671, ಸಿಒ 92005, ಸಿಒ 94012 ಈ ತಳಿಗಳ ಕಬ್ಬನ್ನು ಪೂರೈಸಿದ ರೈತರಿಗೆ 2800 ರೂ.ನಂತೆ ದರವನ್ನು ಈಗಾಗಲೇ ಪಾವತಿಸಲಾಗಿದೆ. ಎರಡನೇ ಕಂತು ಒಟ್ಟು ಸೇರಿ ಕಳೆದ ಹಂಗಾಮಿನ ಪ್ರತಿ ಟನ್ ಕಬ್ಬಿಗೆ 3100 ರೂಪಾಯಿ ಆಗುತ್ತದೆ. ಕರ್ನಾಟಕದಲ್ಲಿಯೇ ಅತೀ ಹೆಚ್ಚು ದರವನ್ನು ಘೋಷಿಸಿದ ಕಾರ್ಖಾನೆ ನಮ್ಮದು ಎಂದು ವಾಡೆನ್ನವರ ಹರ್ಷ ವ್ಯಕ್ತಪಡಿಸಿದರು.
ಇನ್ನುಳಿದ ಎಲ್ಲಾ ತಳಿಯ ಕಬ್ಬನ್ನು ಪೂರೈಸಿದ ರೈತರಿಗೆ ಈಗಾಗಲೇ 2700ರೂ.ಯಂತೆ ಆಯಾ ರೈತರ ಖಾತೆಗಳಿಗೆ ಪಾವತಿಸಲಾಗಿದೆ. ಎರಡನೇ ಕಂತು ಸೇರಿ ಒಟ್ಟು ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಸಿದ ಪ್ರತಿ ಟನ್‍ಗೆ ರೂಪಾಯಿ 3000/ ಆಗುತ್ತದೆ ಎಂದು ಅವರು ತಿಳಿಸಿದರು.
ನಮ್ಮ ಕಾರ್ಖಾನೆಯ ವತಿಯಿಂದ ರಿಯಾಯತಿ ದರದಲ್ಲಿ ಕಬ್ಬಿನ ಬೀಜವನ್ನು ಪೂರೈಸಲಾಗುತ್ತಿದೆ. ಈ ವರ್ಷದಿಂದ ಅತಿ ಕಡಿಮೆ ವೆಚ್ಚದಲ್ಲಿ ರೈತರ ಕಬ್ಬಿನ ಗದ್ದೆಗಳಿಗೆ ಡ್ರಿಪ್ ಮಾಡುವ ಯೋಜನೆ ಇದೆ. ಆಸಕ್ತರು ನಮ್ಮ ಕಾರ್ಖಾನೆಯ ಕಚೇರಿಗಳಿಗೆ ಭೇಟಿ ಕೊಟ್ಟು ಹೆಸರು ನೋಂದಾಯಿಸಲು ವಿನಂತಿಸಿಕೊಳ್ಳುತ್ತೇವೆ. ಪ್ರತೀ ವರ್ಷದಂತೆ ಈ ವರ್ಷವೂ ಗುಣಮಟ್ಟ, ಗರಿಷ್ಠ ರಿಕವರಿ ಇರುವ ಕಬ್ಬನ್ನು ಕಾರ್ಖಾನೆಗೆ ಪೂರೈಸಿ ಕಾರ್ಖಾನೆಯ ಯಶಸ್ಸಿಗೆ ಸಹಕರಿಸಬೇಕು ಎಂದು ವಾಡೆನ್ನವರ ರೈತರಲ್ಲಿ ಕೋರಿದ್ದಾರೆ
ಬೆಳಗಾವಿ ಶುಗರ್ಸ್ ಪ್ರೈ.ಲಿ ಕಾರ್ಖಾನೆಗೆ ಸಂಬಂಧಿಸಿದ ನಿರ್ಧಾರಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ಸಿದ್ದಾರ್ಥ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.