ಗೋಕಾಕ:ಬೆಳುವಲ ಪ್ರಕಾಶನದ ಸೇವೆ ಅನನ್ಯ : ಬಸನಗೌಡ ಪಾಟೀಲ

ಬೆಳುವಲ ಪ್ರಕಾಶನದ ಸೇವೆ ಅನನ್ಯ : ಬಸನಗೌಡ ಪಾಟೀಲ
ಗೋಕಾಕ ಏ 18: ತೆರೆಯಮರೆ ಯಲ್ಲಿದ್ದುಕೊಂಡು ಕನ್ನಡ ನಾಡು ನುಡಿ, ಕಲೆ ಸಾಹಿತ್ಯ ಸೇವೆ ಮಾಡಿದ ಮಹನೀಯರನ್ನು ಗುರುತಿಸಿ ಗೌರವಿಸುತ್ತಿರುವ ಬೆಳುವಲ ಪ್ರಕಾಶನದ ಸೇವೆ ಅನನ್ಯವಾಗಿದ್ದು, ಈ ಸಂಸ್ಥೆ ಚಿರಕಾಲ ಬೆಳಗಲಿ ಎಂದು ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಚೇರ್ಮನ್ ಬಸನಗೌಡ ಪಾಟೀಲ ಹಾರೈಸಿದರು.
ಶುಕ್ರವಾರದಂದು ನಗರದ ಬಸವ ಮಂದಿರದಲ್ಲಿ ಬಳೋಬಾಳದ ಬೆಳವಲ ಪ್ರಕಾಶನ ಆಶ್ರಯದಲ್ಲಿ ದಿ. ಭೀಮಪ್ಪ ಬಾಳಪ್ಪ ಹನಗಂಡಿ ಸ್ಮರಣಾರ್ಥ ಬೆಳುವಲ ಸಿರಿ ಪ್ರಶಸ್ತಿ ಪ್ರದಾನ, ಡಾ. ಸುರೇಶ ಹನಗಂಡಿಯವರ ಶರಣ ಸಾಹಿತ್ಯ ಅವಲೋಕನ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃತಿ ಪರಿಚಯಿಸಿ ಮಾತನಾಡಿದ ಸವದತ್ತಿಯ ವಿಶ್ರಾಂತ ಪ್ರಾಚಾರ್ಯ ಡಾ. ವೈ ಎಂ ಯಾಕೊಳ್ಳಿ ಅವರು, ಶರಣ ಸಾಹಿತ್ಯ ಅವಲೋಕನ ಗ್ರಂಥವು ಸೃಜನೇತರ ವ್ಯಾಕರಣಶಾಸ್ತ್ರ ಅವಲೋಕನ ಗ್ರಂಥವಾಗಿದೆ. ಕಥೆ, ಕಾದಂಬರಿ, ನಾಟಕ -ಕಾವ್ಯದಂತಹ ಸೃಜನಶೀಲ ಬರಹಗಾರರ ಸಾಹಿತ್ಯದ ನೈಜ ಮೌಲ್ಯವನ್ನು ಪರಿಚಯಿಸುವ ವಿಮರ್ಶಕರು ಇಂದು ವಿರಳರಾಗಿದ್ದು, ವಿರಳರಲ್ಲಿ ಅತಿ ವಿರಳರಾದ ಡಾ. ಸುರೇಶ ಹನಗಂಡಿ ಅವರ ಶರಣ ಸಾಹಿತ್ಯ ಅವಲೋಕನ ಕೃತಿ ಕನ್ನಡ ಸಾಹಿತ್ಯ ಲೋಕದ ಮಹತ್ವದ ಕೃತಿಗಳಲ್ಲಿ ಒಂದಾಗಿ ಸೇರ್ಪಡೆಯಾಗಿದೆ ಎಂದರು.
ಲಿಂಗಾಯತ ಅಧ್ಯಯನಗಳು, ಮಹಾಕವಿ ಹರಿಹರನ ಕೃತಿಗಳ ಪದಕೋಶ, ಉದ್ದಾನೇಶ ಚರಿತೆ, ಸೋದೆಯ ಸದಾಶಿವರಾಯರ ಕೃತಿಗಳು ಮುಂತಾದ 10-12 ಕೃತಿಗಳ ಮೌಲಿಕ ವಿಮರ್ಶೆ ಸಹೃದಯರಿಗೆ ಆಪ್ತವೆನಿಸುತ್ತದೆ. ಕೃತಿಗಳ ವಿಮರ್ಶೆಯಲ್ಲಿ ವಿಮರ್ಶಕರ ತಲಸ್ಪರ್ಶೀಯ ಒಳ ಹೊರಗಿನ ಓದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ ಎಂದರು.
ವೇದಿಕೆಯ ಮೇಲೆ ಕೃತಿಕಾರ ಡಾ.ಸುರೇಶ ಹನಗಂಡಿ, ಚಿಕ್ಕೋಡಿಯ ವಕೀಲ ಬಿ.ಡಿ. ಪಾಟೀಲ ಮತ್ತು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತೇಶ ತಾಂವಶಿ ಇದ್ದರು.
ಈ ಸಂದರ್ಭದಲ್ಲಿ ದಿ. ಭೀಮಪ್ಪ ಬಾಳಪ್ಪ ಹನಗಂಡಿ ಅವರ ಸ್ಮರಣಾರ್ಥ ಸಾಹಿತ್ಯ ಕ್ಷೇತ್ರದಲ್ಲಿ ಮಹಾಲಿಂಗ ಮಂಗಿ, ಎ. ವೈ.ಪಂಗಣ್ಣವರ, ಸಂಗಮೇಶ ಗುಜಗೊಂಡ, ಪ್ರಕಾಶ ಕೋಟಿನತೋಟ. ಶಿಕ್ಷಣ ಕ್ಷೇತ್ರದಲ್ಲಿ ಎಂ.ಪಿ.ಕೊಣ್ಣೂರು, ಭರಮಗೌಡ ಪಾಟೀಲ, ಲಕ್ಷ್ಮಣ ಚೌರಿ. ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಆರ್.ಎನ್.ಪಾಟೀಲ. ಸಂಗೀತ ಕ್ಷೇತ್ರದಲ್ಲಿ ಜಿ.ಕೆ.ಕಾಡೇಶಕುಮಾರ. ರಂಗಭೂಮಿಯಲ್ಲಿ ಈಶ್ವರಚಂದ್ರ ಬೆಟಗೇರಿ. ಪತ್ರಿಕೋದ್ಯಮದಲ್ಲಿ ಮಲ್ಲಪ್ಪ ಜೋತಾವರ. ಸಂಘಟನಾ ಕ್ಷೇತ್ರದಲ್ಲಿ ಶಕುಂತಲಾ ದಂಡಗಿ, ಭಾರತಿ ಮದಭಾವಿ, ರಜನಿ ಜೀರಗ್ಯಾಳ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಯೋಗದಲ್ಲಿ ಬಸಪ್ಪ ಬಡವಣ್ಣಿ ಮುಂತಾದವರಿಗೆ ಬೆಳುವಲ ಸಿರಿ ಪ್ರಶಸ್ತಿಯನ್ನು ಡಾ ಸುರೇಶ ಹನಗಂಡಿ ನೀಡಿ ಗೌರವಿಸಿದರು.
ಪ್ರಶಸ್ತಿ ಪುರಸ್ಕøತರ ಪರವಾಗಿ ವಿಶ್ರಾಂತ ಪ್ರಾಧ್ಯಾಪಕ ಸಂಗಮೇಶ ಗುಜಗೊಂಡ ಅಭಿನಂದನೆಯ ಮಾತುಗಳನ್ನಾಡಿದರು.
ಕಲಾವಿದ ಜಿ ಕೆ ಕಾಡೇಶ ಕುಮಾರ ಪ್ರಾರ್ಥಿಸಿದರು. ವಿಮರ್ಶಕ ಡಾ. ಸುರೇಶ ಹನಗಂಡಿ ಸ್ವಾಗತಿಸಿದರು. ಡಾ.ಆನಂದ ಜಕ್ಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಮೇಶ ಮಿರ್ಜಿ ನಿರೂಪಿಸಿದರು. ನಿಂಗಪ್ಪ ಸಂಗ್ರೇಜಿಕೊಪ್ಪ ವಂದಿಸಿದರು.