RNI NO. KARKAN/2006/27779|Saturday, November 2, 2024
You are here: Home » breaking news » ಗೋಕಾಕ:ಗೋಕಾಕ ನೂತನ ಜಿಲ್ಲೆಯನ್ನಾಗಿಸಿ, ಕೌಜಲಗಿ ಪಟ್ಟಣವನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಿಸಿ : ಡಾ.ರಾಜೇಂದ್ರ ಸಣ್ಣಕ್ಕಿ

ಗೋಕಾಕ:ಗೋಕಾಕ ನೂತನ ಜಿಲ್ಲೆಯನ್ನಾಗಿಸಿ, ಕೌಜಲಗಿ ಪಟ್ಟಣವನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಿಸಿ : ಡಾ.ರಾಜೇಂದ್ರ ಸಣ್ಣಕ್ಕಿ 

ಗೋಕಾಕ ನೂತನ ಜಿಲ್ಲೆಯನ್ನಾಗಿಸಿ, ಕೌಜಲಗಿ ಪಟ್ಟಣವನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಿಸಿ : ಡಾ.ರಾಜೇಂದ್ರ ಸಣ್ಣಕ್ಕಿ

ಗೋಕಾಕ ಅ 4 : ರಾಜ್ಯದ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಸಂದರ್ಭದಲ್ಲಿ ಜಿಲ್ಲೆಯ ಅತೀ ದೊಡ್ಡ ತಾಲೂಕಾದ ಗೋಕಾಕನ್ನು ಜಿಲ್ಲೆಯನ್ನಾಗಿಸಿ, ಕೌಜಲಗಿ ಪಟ್ಟಣವನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ನಿಯೋಜಿತ ಕೌಜಲಗಿ ತಾಲೂಕಾ ರಚನಾ ಹೋರಾಟ ಸಮಿತಿಯ ಅಧ್ಯಕ್ಷರಾದ ಎಂ.ಆರ್. ಭೋವಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ರಾಜೇಂದ್ರ ಯ. ಸಣ್ಣಕ್ಕಿ ಸರಕಾರವನ್ನು ಆಗ್ರಹಿಸಿದರು.

ಶುಕ್ರವಾರದಂದು ನಗರದಲ್ಲಿ ಜಂಟಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೌಜಲಗಿ ಪಟ್ಟಣವು ತಾಲೂಕು ರಚನೆಗಾಗಿ 5 ದಶಕಗಳಿಂದ ಹೋರಾಡುತ್ತ ಬಂದಿದೆ. ತಾಲೂಕು ಪುನರವಿಂಗಡಣಾ ಸಮಿತಿಗಳಾದ ಹುಂಡೇಕಾರ, ಗದ್ದಿಗೌಡರ, ವಾಸುದೇವ ಸಮಿತಿಗಳು ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಬೇಕೆಂದು ಶಿಫಾರಸ್ಸು ಮಾಡಿವೆ. ಸರ್ಕಾರ ನೇಮಿಸಿದ ತಾಲೂಕ ಪುನರವಿಂಗಡಣಾ ಆಯೋಗಗಳಿಗೆ ಮನವಿ ಸಲ್ಲಿಸುತ್ತ ಬಂದಿದ್ದೇವೆ. ಈ ಎಲ್ಲ ಆಯೋಗಗಳು ಕ್ಷೇತ್ರಾಧ್ಯಯನ ಕೈಗೊಂಡು ಸುಮಾರು 60 ಗ್ರಾಮಗಳಿಗೆ ಮಧ್ಯವರ್ತಿ ಕೇಂದ್ರವಾಗಿರುವ ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವಾಗಿ ರಚಿಸಬಹುದೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿವೆ. ಒಟ್ಟು 61 ಗ್ರಾಮಗಳನ್ನೊಳಗೊಂಡ ಕೌಜಲಗಿ ತಾಲೂಕನ್ನು ರಚಿಸಬೇಕು ಹಾಗೂ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ನೂತನ ಜಿಲ್ಲೆಯಾಗಿಸಬೇಕೆಂದು ಕೌಜಲಗಿ ಪಟ್ಟಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ ಜಾರಕಿಹೊಳಿಯವರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಗೆ ಕೌಜಲಗಿ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಮನವಿ ಸಲ್ಲಿಸಲಾಗಿದೆ. ಹಾಗೆಯೇ ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿಯವರು ಇತ್ತೀಚೆಗೆ ಸುದ್ದಿಗೋಷ್ಠಿವೊಂದರಲ್ಲಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಮುನ್ನ ತಾಲೂಕು ಪುನರ್‍ವಿಂಗಡಣೆ ಮಾಡಬೇಕು, ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ರಚಿಸಬೇಕೆಂದು ನಮ್ಮ ಹೋರಾಟ ಸಮಿತಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರೂ ಸಹ ತಮ್ಮ ಅರಭಾವಿ ವಿಧಾನಸಭಾ ಮತಕ್ಷೇತ್ರದ ಕೌಜಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ರಚಿಸುತ್ತೇವೆ ಎಂದು ಹೇಳಿದ್ದಾರೆ. ಅದರಂತೆ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದಾರೆ. ಈ ಎಲ್ಲ ಜನಪ್ರತಿನಿಧಿಗಳ ಹಾಗೂ ಕೌಜಲಗಿ ಸುತ್ತಮುತ್ತಲಿನ ಗ್ರಾಮಸ್ಥರ ಪ್ರಮುಖ ಬೇಡಿಕೆಯಾದ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಶೀಘ್ರದಲ್ಲೇ ಘೊಷಿಸಬೇಕೆಂದು ಒತ್ತಾಯಪಡಿಸಲು ನಿಯೋಜಿತ ಕೌಜಲಗಿ ತಾಲೂಕಾ ರಚನಾ ಹೋರಾಟ ಸಮಿತಿಯ ನಿಯೋಗವೊಂದು ಬೆಂಗಳೂರಿಗೆ ಹೋಗಿ ಮತ್ತೊಮ್ಮೆ ಮನವಿಯನ್ನು ಸಲ್ಲಿಸಲಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಎಂ.ಆರ್. ಭೋವಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ರಾಜೇಂದ್ರ ಯ. ಸಣ್ಣಕ್ಕಿ ಜಂಟಿಯಾಗಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ರವೀಂದ್ರ ಪರುಶೆಟ್ಟಿ, ಶ್ರೀಕಾಂತಯ್ಯ ವಿರಕ್ತಮಠ, ನೀಲಪ್ಪ ಕೇವಟಿ, ಬಸಪ್ಪ ಭೂತಣ್ಣವರ, ಸುಭಾμï ಕೌಜಲಗಿ, ಬಸವರಾಜ ಹಿರೇಮಠ, ಅಶೋಕ ಶಿವಾಪುರ, ಮಹಾದೇವ ಬುದ್ನಿ, ವೆಂಕಟೇಶ ದಳವಾಯಿ, ಈರಪ್ಪ ಬಡಿಗೇರ, ಬಸವರಾಜ ಜೋಗಿ, ಶಂಕರ ಜ್ಯೋತಿನವರ, ಪ್ರಕಾಶ ಶೆಟ್ಟರ, ಜಗದೀಶ್ ಶಿವಾಪುರ, ಶ್ರೀಕಾಂತ್ ಗಾಣಿಗೇರ, ಡಾ. ರಾಜು ಕಂಬಾರ ಮುಂತಾದವರು ಉಪಸ್ಥಿತರಿದ್ದರು.

Related posts: