ಗೋಕಾಕ:ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ : ಈದ್ ಉಲ್ ಫಿತ್ರ್: ಮುಸ್ಲಿಂ ಸಮುದಾಯದ ಸಾವಿರಾರು ಮಂದಿಯಿಂದ ಸಾಮೂಹಿಕ ಪ್ರಾರ್ಥನೆ

ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ :
ಈದ್ ಉಲ್ ಫಿತ್ರ್: ಮುಸ್ಲಿಂ ಸಮುದಾಯದ ಸಾವಿರಾರು ಮಂದಿಯಿಂದ ಸಾಮೂಹಿಕ ಪ್ರಾರ್ಥನೆ
ಗೋಕಾಕ ಎ 11 : : ನಗರದ ಅಬ್ದುಲ್ ಕಲಾಂ ಕಾಲೇಜಿನ ಈದ್ಗಾ ಮೈದಾನ ಹಾಗೂ ನಗರದ ಇತರ ಮಸೀದಿಗಳಲ್ಲಿ ಗುರುವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬಕ್ಕೆ ತೆರೆ ಎಳೆದರು.
ಒಂದು ತಿಂಗಳು ಉಪವಾಸ ಆಚರಿಸಿದ ಬಳಿಕ ಜಕಾತ್, ಫಿತ್ರ ದಾನ ಮಾಡಿದರು.
ಶ್ವೇತವಸ್ತ್ರ ಧರಿಸಿ ಗುಂಪು ಗುಂಪಾಗಿ ಖಬರ್‌ಸ್ಥಾನ ಹಾಗೂ ಮಸೀದಿಗಳತ್ತ ಬಂದ ಮುಸ್ಲಿಮರು ಮೊದಲು ಸಿಹಿ ಹಂಚಿ, ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಹೊಸ ಬಟ್ಟೆಗಳಲ್ಲಿ, ಸಾಂಪ್ರದಾಯಿಕ ಪೋಷಾಕುಗಳಲ್ಲಿ ಕಂಗೊಳಿಸುತ್ತಿದ್ದ ಮಕ್ಕಳು ಹಬ್ಬದ ಸಂಭ್ರಮ ಹೆಚ್ಚಿಸಿದ್ದರು.
ವಿಶೇಷ ಭೋಜನ: ತಿಂಗಳಿಡೀ ಉಪವಾಸ ಆಚರಿಸಿದ್ದ ಮುಸ್ಲಿಮರು, ಈದ್ ಉಲ್ ಫಿತ್ರ್ ದಿನ ವಿಶೇಷ ಊಟ ಸೇವಿಸಿದರು. ಶಾವಿಗೆ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಸಕ್ಕರೆ, ಹಾಲು, ಗಸಗಸೆ, ಪಿಸ್ತಾ ಬಳಸಿ ತಯಾರಿಸುವ ವಿಶೇಷ ಸಿಹಿ ತಿಂಡಿಗಳು ಹಾಗೂ ಬಗೆಬಗೆಯ ಮಾಂಸಾಹಾರಗಳನ್ನು ಮನೆಯಲ್ಲೇ ಸಿದ್ಧಪಡಿಸಲಾಗಿತ್ತು.ಸ್ನೇಹಿತರ, ಸಂಬಂಧಿಕರ ಮನೆಗೆ ತೆರಳಿ ಶುಭಾಶಯ ಕೋರಿದರು
ಈ ಸಂದರ್ಭದಲ್ಲಿ ಅಮೀರಸಾಬ ಹಾಜಿ ಕುತುಬುದ್ದೀನ ಬಸ್ಸಾಪೂರ, ಅಂಜುಮನ ಅಧ್ಯಕ್ಷ ಜಾವೇದ್ ಗೋಕಾಕ, ನಗರಸಭೆ ಸದಸ್ಯರುಗಳಾದ ಅಬ್ಬಾಸ್ ದೇಸಾಯಿ, ಕುತುಬುದ್ದೀನ ಗೋಕಾಕ, ಮುಖಂಡರುಗಳಾದ ಮುಸ್ತಾಕ ಖಂಡಾಯತ, ಇಸ್ಮಾಯಿಲ್ ಗೋಕಾಕ, ದಸ್ತಗಿರಿ ಪೈಲವಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.