ಬೆಳಗಾವಿ:ನೂತನ ಶಿಕ್ಷಣ ನೀತಿ ಜಾರಿ ಮಾಡುವುದಿಲ್ಲ: ಸಚಿವ ಸತೀಶ ಜಾರಕಿಹೊಳಿ

ನೂತನ ಶಿಕ್ಷಣ ನೀತಿ ಜಾರಿ ಮಾಡುವುದಿಲ್ಲ: ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ ಮೇ 30 :ಕೇಂದ್ರ ಸರ್ಕಾರ ರೂಪಿಸಿದ ನೂತನ ಶಿಕ್ಷಣ ನೀತಿಯನ್ನು ನಾವು ಹಿಂದೆಯೂ ಒಪ್ಪಿರಲಿಲ್ಲ. ಈಗಲೂ ಒಪ್ಪುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೇಸರೀಕರಣ ಆಗಬಾರದು.ಅದರ ಬಗ್ಗೆ ಶಿಕ್ಷಣ ತಜ್ಞರು, ಪರಿಣತರು ಕೂಡ ತಕರಾರು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದೇ ಅಭಿಪ್ರಾಯ ಪಟ್ಟಿದ್ದಾರೆ. ತಜ್ಞರ ಹೊಸ ಸಮಿತಿ ರಚಿಸಿ, ಪರಾಮರ್ಶೆ ಮಾಡಲಾಗುವುದು. ಅಲ್ಲಿ ಬರುವ ಅಭಿಪ್ರಾಯದ ಮೇಲೆ ಹೆಜ್ಜೆ ಇಡಲಾಗುವುದು’ ಎಂದೂ ಅವರು ನಗರದಲ್ಲಿ ಮಂಗಳವಾರ ಮಾಧ್ಯದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವುದು ಅವೈಜ್ಞಾನಿಕ, ಅನನುಕೂಲ ಕೂಡ. ನಾನು ವಿರೋಧ ಪಕ್ಷದಲ್ಲಿದ್ದಾಗಲೂ ಇದನ್ನು ವಿರೋಧಿಸಿದ್ದೇನೆ. ಈಗಲೂ ಅದಕ್ಕೆ ಸಹಮತ ಇಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಒಂದು ಇಲಾಖೆಯನ್ನು ಇಲ್ಲಿಗೆ ತಂದರೆ ಇನ್ನೊಂದು ಇಲಾಖೆ ಬೆಂಗಳೂರಿನಲ್ಲಿ ಉಳಿಯುತ್ತದೆ. ಒಬ್ಬ ಅಧಿಕಾರಿಯ ಸಹಿಗೆ ಬೆಳಗಾವಿಗೆ, ಇನ್ನೊಬ್ಬರ ಸಹಿಗೆ ಬೆಂಗಳೂರಿಗೆ ಅಲೆಯಬೇಕಾಗುತ್ತದೆ. ಇದು ಸರಿಯಾದ ಕ್ರಮವಲ್ಲ. ಸುವರ್ಣ ಸೌಧವನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಬೇಕಾದರೆ ಬೇರೆ ಏನಾದರೂ ಕೆಲಸ ಮಾಡುತ್ತೇವೆ’ ಎಂದರು. ‘ಸುವರ್ಣ ಸೌಧದಲ್ಲಿ ಆರು ತಿಂಗಳಿಗೆ ಎರಡು ಬಾರಿ ಕ್ಯಾಬಿನೆಟ್ ಸಭೆ ಕರೆಯುವ ಬಗ್ಗೆ ಚಿಂತನೆ ನಡೆದಿದೆ’ ಎಂದೂ ಅವರು ಹೇಳಿದರು. ‘ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆ ವಿಚಾರದಲ್ಲಿ ಅಕ್ರಮ ನಡಿದಿದೆ ಎಂಬ ಆರೋಪಗಳು ಕೇಳಿಬಂದಿವೆ. ₹100 ಕೋಟಿಗೂ ಅಧಿಕ ನಷ್ಟವಾಗಿದೆ. ಈ ಪ್ರಕರಣವನ್ನು ಸುಮ್ಮನೇ ಬಿಡುವುದಿಲ್ಲ. ‘ಬುಡಾ’ ಅಕ್ರಮದ ಬಗ್ಗೆ ಪ್ರತ್ಯೇಕ ಸಭೆ ಮಾಡಿ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುತ್ತೇವೆ’ ಎಂದರು.ಸುವರ್ಣಸೌಧಕ್ಕೆ ಕಚೇರಿ ಸ್ಥಳಾಂತರ ಇಲ್ಲಜಿಲ್ಲೆ ವಿಭಜನೆಗೆ ಈಗಲೂ ಬದ್ಧ: ‘ಬೆಳಗಾವಿ ಜಿಲ್ಲೆ ಪ್ರಾದೇಶಿಕವಾಗಿ ಬಹಳ ದೊಡ್ಡದಿದೆ. ಆಡಳಿತದ ದೃಷ್ಟಿಯಿಂದ ಇದು ಸರಿಯಲ್ಲ. ಜಿಲ್ಲೆ ವಿಭಜನೆ ಆಗಬೇಕು ಎಂದು ನಾನು ಹಿಂದೆಯೂ ಹೇಳಿದ್ದೆ. ಈಗಲೂ ಅಷ್ಟೇ; ಆಡಳಿತ ಸುಗಮವಾಗಲು, ಅಭಿವೃದ್ಧಿ ದೃಷ್ಟಿಯಿಂದ ಗೋಕಾಕ ಹಾಗೂ ಚಿಕ್ಕೋಡಿ ಕೇಂದ್ರವಾಗಿ ಇನ್ನೆರಡು ಜಿಲ್ಲೆ ರಚನೆ ಆಗಬೇಕಿದೆ’ ಎಂದೂ ಸತೀಶ ಹೇಳಿದರು. ಸಚಿವರ ಮಾತಿನ ಬೆನ್ನಿಗೇ ಮಾತನಾಡಿದ ಶಾಸಕ ಮಹಾಂತೇಶ ಕೌಜಲಗಿ, ‘ಬೈಲಹೊಂಗಲ ಕೇಂದ್ರವಾಗಿಯೂ ಹೊಸ ಜಿಲ್ಲೆ ಆಗಬೇಕು ಎಂಬ ಬೇಡಿಕೆ ನಮ್ಮದೂ ಇದೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸತೀಶ, ‘ಬೇಡಿಕೆ ಎಲ್ಲರದ್ದೂ ಇದೆ. ಕುಳಿತು ಚರ್ಚೆ ಮಾಡೋಣ. ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದರು.