ಬೆಳಗಾವಿ:ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ : ನೂತನ ಸಚಿವ ಸತೀಶ ಭರವಸೆ

ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ : ನೂತನ ಸಚಿವ ಸತೀಶ ಭರವಸೆ
ಗೋಕಾಕ ಮೇ 28 : ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಕೈಗೊಳ್ಳಲಾಗುವುದು ಎಂದು ನೂತನ ಸಚಿವ ಸತೀಶ ಜಾರಕಿಹೊಳಿ ಹೇಳಿದರು
ಸಂಪುಟ ದರ್ಜೆ ಸಚಿವರಾಗಿ ಮೊದಲ ಬಾರಿ ಬೆಳಗಾವಿಗೆ ಆಗಮಿಸಿದ ಅವರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಇಬ್ಬರು ಸಚಿವರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಜಿಲ್ಲೆಯಲ್ಲಿ ಅಸಮಾಧಾನ ಇದೆ. ಆದರೆ ಬೇರೆ ಬೇರೆ ಹುದ್ದೆ ಕೊಟ್ಟು ಅವರೆಲ್ಲರನ್ನೂ ಸಮಾಧಾನ ಮಾಡುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಬಂದ್ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ಸ್ವಾಭಾವಿಕ ಮತ್ತು ಸಹಜ ಕೂಡಾ. ಹೊಸ ಸರ್ಕಾರ ಬಂದ ಮೇಲೆ ಹೀಗೆ ಮಾಡುವ ವಾಡಿಕೆ ಇದೆ. ಸಂಬಂಧಪಟ್ಟ ಮಂತ್ರಿಗಳು ಬಂದು ಗಮನಹರಿಸುತ್ತಾರೆ. ಜನಪರವಾಗಿರುವ ಯೋಜನೆಗಳನ್ನು ಮುಂದುವರಿಸುತ್ತೇವೆ. ಅನಾವಶ್ಯಕ ಇರುವ ಕೆಲಸಗಳನ್ನು ಬಂದ್ ಮಾಡುತ್ತೇವೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಬಜರಂಗದಳ ಹಾಗೂ ಆರ್‌ಎಸ್‌ಎಸ್ ಬ್ಯಾನ್ ವಿಚಾರದ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರಶ್ನಿಸಿದಾಗ, ಅಂತಹ ತರಾತುರಿ ಏನಿಲ್ಲ, ಉದಾಹರಣೆ ಕೊಟ್ಟಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಪ್ರಣಾಳಿಕೆಯಲ್ಲಿ ಬ್ಯಾನ್ ಮಾಡುತ್ತೇವೆ ಎಂದು ಹೇಳಿಲ್ಲ. ಗದ್ದಲ ಮಾಡಿದರೆ ಮಾತ್ರ ಬ್ಯಾನ್ ಮಾಡುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಆಡಳಿತ ನಡೆಸುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ಯಾರೇ ಇದ್ದರೂ ಕಾಂಗ್ರೆಸ್‌ನವರೇ ಇರುತ್ತಾರೆ. ಈ ಬಗ್ಗೆ ಫಾರ್ಮುಲಾ ಏನಾಗಿದೆಯೋ ಗೊತ್ತಿಲ್ಲ ಎಂದು ಹೇಳಿದರು.
ಭವಿಷ್ಯದಲ್ಲಿ ಮತ್ತೊಂದು ಸಚಿವ ಸ್ಥಾನ ಜಿಲ್ಲೆಗೆ ಸಿಗುವ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಈಗಂತೂ ಎಲ್ಲವೂ ಭರ್ತಿಯಾಗಿದೆ. ನೀವು ನಮಗೆ ಟೇಕಾಫ್ ಆಗಿಲ್ಲ ಅಂತಿದ್ದಿರಿ. ಹೀಗಾಗಿ ನಾವು ಫುಲ್ ಟೇಕಾಫ್ ಆಗಿದ್ದೇವೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಬಿಜೆಪಿಯವರು ನಮಗೆ ಟೈಂ ಕೊಡಬೇಕು. ಈಗಾಗಲೇ ಎಲ್ಲ ರೀತಿಯ ಕೆಲಸ ಪ್ರಾರಂಭ ಆಗಿದೆ. ಎಲ್ಲ ಭರವಸೆ ಈಡೇರಿಸಲು ನಮಗೆ ಟೈಂ ಕೊಡಬೇಕು ಎಂದು ಹೇಳಿದರು.