ಗೋಕಾಕ:ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹಾಲು ಪೂರೈಸುವ ರೈತರ ಬಿಕ್ಕಟ್ಟನ್ನು ನಿವಾರಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ
ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹಾಲು ಪೂರೈಸುವ ರೈತರ ಬಿಕ್ಕಟ್ಟನ್ನು ನಿವಾರಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ
ಗೋಕಾಕ ಅ 29: ಹಾಲು ಉತ್ಪಾದಕರ ಸಹಕಾರಿ ಸಂಘಗಳ ಪ್ರೋತ್ಸಾಹಧನ ಜಮಾ ಆಗದಿರುವುದಕ್ಕೆ ಆಧಾರ ಲಿಂಕ್ ಕಾರಣವಾಗಿದ್ದು, ಈ ಕುರಿತು ವಾರದೊಳಗೆ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳ ಸಭೆಯನ್ನು ನಡೆಸುವಂತೆ ಜಿಲ್ಲಾಧಿಕಾರಿಗಳನ್ನು ಕೋರುವುದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಮಂಗಳವಾರ ಸಂಜೆ ಜರುಗಿದ ಗೋಕಾಕ ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಹಾಲು ಪೂರೈಸುವ ರೈತರಿಗೆ ಸರ್ಕಾರ 5 ರೂ. ಪ್ರೋತ್ಸಾಹಧನವನ್ನು ಪ್ರತಿ ಲೀಟರ್‍ಗೆ ನೀಡುತ್ತಿದೆ. ಈ ಪ್ರೋತ್ಸಾಹಧನ ಪಡೆಯಲು ರೈತರು ರಾಷ್ಟ್ರೀಕೃತ ಬ್ಯಾಂಕ ಖಾತೆಗಳಿಗೆ ಆಧಾರ ಲಿಂಕ್ ಮಾಡುವುದು ಕಡ್ಡಾಯವಾಗಿದ್ದರೂ, ಬ್ಯಾಂಕಿನ ಅಧಿಕಾರಿಗಳು ರೈತರೊಂದಿಗೆ ಸಹಕರಿಸುತ್ತಿಲ್ಲ. ಇದರಿಂದ ರೈತರಿಗೆ ಬ್ಯಾಂಕಿನಿಂದ ತೊಂದರೆಯಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಉದ್ಭವಿಸಿರುವ ಬಿಕ್ಕಟ್ಟನ್ನು ನಿವಾರಿಸುವುದಾಗಿ ಅವರು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಗಳಿಗೆ ರೈತರೊಂದಿಗೆ ವ್ಯವಹರಿಸಲು ಭಾಷೆಯ ಸಮಸ್ಯೆ ಉಂಟಾಗುತ್ತಿದೆ. ಬಹುತೇಕ ಬ್ಯಾಂಕಿನ ಅಧಿಕಾರಿಗಳು ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮಾತನಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಕನ್ನಡ ಬಲ್ಲವರು ಅಧಿಕಾರಿಗಳು ಇರುವುದರಿಂದ ಇಂತಹ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇದರಿಂದ ರೈತರ ಖಾತೆಗಳಿಗೆ ಆಧಾರ ಲಿಂಕ್ ಮಾಡುವುದು ವಿಳಂಭವಾಗುತ್ತಿದೆ. ಒಂದು ವೇಳೆ ಹಾಲು ಉತ್ಪಾದಕರು ಲಿಂಕ್ ಮಾಡಿದ್ದರೂ ಅಂತಹ ಖಾತೆಗಳಿಗೆ ಸರ್ಕಾರದ ಪ್ರೋತ್ಸಾಹಧನ ಜಮಾ ಆಗಿರುವುದಿಲ್ಲ. ಶೀಘ್ರದಲ್ಲಿಯೇ ಬ್ಯಾಂಕಿನ ಅಧಿಕಾರಿಗಳ ಸಭೆಯನ್ನು ಕರೆದು ಸಮಸ್ಯೆ ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿಗಳನ್ನು ಕೋರುವುದಾಗಿ ಅವರು ಹೇಳಿದರು.
ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ವ್ಯವಸ್ಥಾಪಕ ಡಾ.ಜೆ.ಆರ್. ಮನ್ನೇರಿ, ಉಪ ವ್ಯವಸ್ಥಾಪಕ ಡಾ.ವ್ಹಿ.ಕೆ. ಜೋಶಿ, ಸಹಾಯಕ ವ್ಯವಸ್ಥಾಪಕ ಎನ್.ಟಿ. ಹಡಪದ, ತಾಲೂಕಾ ವಿಸ್ತರ್ಣಾಧಿಕಾರಿ ಎಸ್.ಬಿ. ಕರಬನ್ನವರ ಉಪಸ್ಥಿತರಿದ್ದರು.