ಗೋಕಾಕ:ಕೊರೋನಾ ವೈರಸ್ ಪ್ರಕರಣಗಳು ಕಂಡು ಬಂದಿರುವದಕ್ಕೆ ತಾಲೂಕಾ ಹಾಗೂ ಜಿಲ್ಲಾಡಳಿತವೇ ಕಾರಣ : ಭೀಮಶಿ ಗದಾಡಿ
ಕೊರೋನಾ ವೈರಸ್ ಪ್ರಕರಣಗಳು ಕಂಡು ಬಂದಿರುವದಕ್ಕೆ ತಾಲೂಕಾ ಹಾಗೂ ಜಿಲ್ಲಾಡಳಿತವೇ ಕಾರಣ : ಭೀಮಶಿ ಗದಾಡಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 2 :
ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಕೊರೋನಾ ವೈರಸ್ ಪ್ರಕರಣಗಳು ಕಂಡು ಬಂದಿರುವದಕ್ಕೆ ತಾಲೂಕಾ ಹಾಗೂ ಜಿಲ್ಲಾಡಳಿತವೇ ಕಾರಣವೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಆರೋಪಿಸಿದರು.
ಮಂಗಳವಾರದಂದು ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ಕ್ವಾರಂಟೈನ್‍ದಲ್ಲಿ ಇದ್ದ ವ್ಯಕ್ತಿಗಳ ಟೆಸ್ಟ ವರದಿ ಬರುವ ಪೂರ್ವದಲ್ಲಿ ಹಾಗೂ ಕ್ವಾರಂಟೈನ್ ಅವಧಿ ಪೂರ್ಣಗೊಳ್ಳುವ ಪೂರ್ವದಲ್ಲಿಯೇ ಬಿಡುಗಡೆ ಮಾಡಿದ್ದೇ ಈ ಎಲ್ಲ ಘಟನೆಗಳಿಗೆ ಕಾರಣವಾಗಿದ್ದು ತಾಲೂಕಾಡಳಿತ ಸ್ವಲ್ಪ ಮುಂಜಾಗ್ರತೆ ವಹಿಸಿದ್ದರೆ ಕೊರೋನಾ ಪಾಸಿಟಿವ್ ವ್ಯಕ್ತಿಗಳ ಮನೆಯ 100 ಮೀಟರ ಸೀಲ್‍ಡೌನ್ ಪರಿಸ್ಥಿತಿ ಬರುತ್ತಿಲ್ಲ ಎಂದು ಹೇಳಿದರು.
ಬೃಹತ್ ಪ್ರತಿಭಟನೆಗೆ ನಿರ್ಧಾರ: ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಕಳೆದ ಅಗಸ್ಟ ನೆರೆ ಹಾವಳಿ ಹಾಗೂ ಅತೀವೃಷ್ಟಿ ಉಂಟಾಗಿ ಭಾರೀ ಹಾನಿ ಸಂಭಯಿಸಿತು. ಆ ಸಮಯದಲ್ಲಿ ಮನೆಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಮತ್ತೊಂದು ಮಳೆಗಾಲ ಬಂದರೂ ಪರಿಹಾರ ಸಿಕ್ಕಿಲ್ಲ. ಅಲ್ಲದೆ ನಿರಾಶ್ರಿತರ ಸರ್ವೆ ಕಾರ್ಯ ಸರಿಯಾಗಿ ನಡೆದಿಲ್ಲ. ಅಲ್ಲದೆ ನಿರಾಶ್ರಿತರು ಇನ್ನೂ ಶಾಲೆಗಳಲ್ಲಿ ವಾಸಿಸುತ್ತಿದ್ದಾರೆ. ಇದಕ್ಕೆಲ್ಲ ನಿಜವಾದ ಫಲಾನುಭವಿಗಳಿಗೆ ಪರಿಹಾರ ದೊರೆಯದೆ ಇರುವದು ಕಾರಣವಾಗಿದ್ದು ಇದು ಅಧಿಕಾರಿಗಳ ಬೇಜವಾಬ್ದಾರಿ ಎತ್ತಿ ತೋರಿಸುತ್ತದೆ. ಈ ಬಗ್ಗೆ ಹಲವಾರು ಸಾರೆ ತಹಶೀಲದಾರರಿಗೆ ಮನವಿ ನೀಡಿ ಪರಿಹಾರದ ಬಗ್ಗೆ ವಿನಂತಿಸಿದರೂ ಉಪಯೋಗವೇನೂ ಆಗಿರುವದಿಲ್ಲ. ಅದಕ್ಕಾಗಿ ಮುಂಬರುವ ದಿನಗಳಲ್ಲಿ ನಿರಾಶ್ರಿತರು ತಮ್ಮ ಜಾನುವಾರುಗಳ ಸಮೇತ ಮಿನಿ ವಿಧಾನಸೌಧದ ಮುಂದೆ ಬೃಹತ್ ನಡೆಸಲು ನಿರ್ಧರಿಸಲಾಗಿದೆ ಎಂದು ಭೀಮಶಿ ಗದಾಡಿ ತಿಳಿಸಿದರು. ರೈತರ ಆಕ್ರೋಶ ಪುಟಿದೇಳುವ ಪೂರ್ವದಲ್ಲಿ ತಾಲೂಕಾಡಳಿತ ನಿರಾಶ್ರಿತರ ಸರ್ವೇ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಶಂಕರ ಮದಿಹಳ್ಳಿ, ಭೀಮಶಿ ಹುಲಕುಂದ, ಕುಮಾರ ತಿಗಡಿ, ರಾಯಪ್ಪ ಗೌಡಪ್ಪನವರ, ಕರೆಪ್ಪ ಕಣವಿ ಮುಂತಾದವರು ಇದ್ದರು.