ಗೋಕಾಕ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಕಾರ್ಯವೈಖರಿ ಸ್ವಾಗತಾರ್ಹ : ಜೆ.ಡಿ.ಎಸ್.ಮುಖಂಡ ಅಶೋಕ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಕಾರ್ಯವೈಖರಿ ಸ್ವಾಗತಾರ್ಹ : ಜೆ.ಡಿ.ಎಸ್.ಮುಖಂಡ ಅಶೋಕ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ 14:
ರಾಷ್ಟ್ರದಾಧ್ಯಂತ ಕರೋನಾ ರೋಗ ನಿಯಂತ್ರಣಕ್ಕೆ ರಾಮಭಾಣವಾಗಿರುವ ‘ಲಾಕ್ ಡೌನ್’ ಅವಧಿಯನ್ನು ಮೇ 03 ರವರೆಗೆ ವಿಸ್ತರಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಹಾಗೂ ಈ ನಿಟ್ಟಿನಲ್ಲಿ ಅರ್ಥಪೂರ್ಣ ನಿರ್ಣಯಗಳನ್ನು ಕೈಗೊಳ್ಳುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಕಾರ್ಯವೈಖರಿಯನ್ನು ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ಸ್ವಾಗತಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು ಲಾಕ್ ಡೌನ್ ಉದ್ದೇಶ ಸಂಪೂರ್ಣ ಸಾಕಾರಗೊಳ್ಳಬೇಕಾದ ಅನಿವಾರ್ಯತೆ ಇದ್ದು, ಅದಕ್ಕೆ ಪೂರಕವಾದ ಕ್ರಮಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರ ಕೈಗೊಳ್ಳಬೇಕಾಗಿದೆ. ಈಗಾಗಲೇ 21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಅನೇಕ ಸಂಕಷ್ಟಗಳ ಹೊರತಾಗಿಯೂ ಸಹ ದೇಶದ ಬಹುತೇಕ ಜನತೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಆದರೆ ಜನರ ದಿನನಿತ್ಯದ ಜೀವನಕ್ಕೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಅವರ ಮನೆಬಾಗಿಲಿಗೆ ನೇರವಾಗಿ ತಲುಪಿಸುವಂತಹ ವ್ಯವಸ್ಥೆಯಾದಾಗ ಮಾತ್ರ ಮುಂದಿನ ದಿನಗಳಲ್ಲಿ ಸಂಪೂರ್ಣ ಲಾಕ್ ಡೌನ್ ಯಶಸ್ವಿಯಾಗಲು ಸಾಧ್ಯ. ದಿನನಿತ್ಯದ ಉಪಜೀವನಕ್ಕೆ ಅವಶ್ಯಕವಾದ ಆಹಾರ ಸಾಮಗ್ರಿಗಳು ಮತ್ತು ವೈಧ್ಯಕೀಯ ಸೌಲಭ್ಯ ದೊರೆತಾಗ ಜನರು ತಮ್ಮಷ್ಟಕ್ಕೆ ತಾವೇ ಮನೆಯಲ್ಲಿ ದಿಗ್ಬಂಧನ ಹಾಕಿಕೊಳ್ಳುತ್ತಾರೆ. ಅಂತಹ ವ್ಯವಸ್ಥೆಯನ್ನು ರಾಜ್ಯ ಸರಕಾರ ಕೂಡಲೇ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ತಾವು ಈ ಹಿಂದೆಯೇ ಇಂತಹ ಕಾರ್ಯಕ್ಕೆ ಸೇವಾ ಸಂಸ್ಥೆಗಳ ಸೇವೆಯನ್ನು ಬಳಸಿಕೊಳ್ಳಲು ಜಿಲ್ಲಾಢಳಿತಕ್ಕೆ ಕೋರಿದ್ಧೇವು. ಈಗಲೂ ಸಹ ಸರಕಾರ ವೈಧ್ಯಕೀಯ ನಿರ್ದೇಶನಗಳಿಗೆ ಪೂರಕವಾದ ಕಾರ್ಯ ಮಾಡುವ ಸೇವಾಸಂಸ್ಥೆಗಳನ್ನು ಈ ಕುರಿತು ಸಂಪರ್ಕಿಸಿ ಅವರ ರಚನಾತ್ಮಕ ಸೇವೆಯನ್ನು ಪಡೆಯಲು ಸರಕಾರವನ್ನು ಮತ್ತೊಮ್ಮೆ ಒತ್ತಾಯಿಸಿದ್ದಾರೆ.