ಗೋಕಾಕ:ಮನೆ, ಜಾನುವಾರು ಮತ್ತು ಬೆಳೆಹಾನಿಗೂ ಸೂಕ್ತ ಪರಿಹಾರವನ್ನು ನೀಡಲು ಸರ್ಕಾರ ಮುಂದಾಗಬೇಕು : ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ

ಮನೆ, ಜಾನುವಾರು ಮತ್ತು ಬೆಳೆಹಾನಿಗೂ ಸೂಕ್ತ ಪರಿಹಾರವನ್ನು ನೀಡಲು ಸರ್ಕಾರ ಮುಂದಾಗಬೇಕು : ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 21 :
ನೆರೆ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಲು 10 ಲಕ್ಷ ಹಾಗೂ ಜಾನುವಾರುಗಳು ಹಾಗೂ ಬೆಳೆಹಾನಿಗೂ ಸೂಕ್ತ ಪರಿಹಾರವನ್ನು ನೀಡಲು ಸರ್ಕಾರ ಮುಂದಾಗಬೇಕೆಂದು ಉಪ್ಪಾರ ಸಂಘದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಮತ್ತು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಹೇಳಿದರು.
ಬುಧವಾರ ಮಧ್ಯಾನ್ಹ ನಗರದ ಎಪಿಎಮ್‍ಸಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬೀಕರ ಜಲಪ್ರವಾಹದಿಂದ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 18 ಜಿಲ್ಲೆಗಳ ಸಾವಿರಾರು ಹಳ್ಳಿಗಳು ನೆರೆ ಹಾವಳಿಗೆ ತುತ್ತಾಗಿದ್ದು ಇದರಿಂದಾಗಿ ಜನತೆ ಅತಿ ಕಷ್ಷದಲ್ಲಿ ಇದ್ದು ಪರಿಹಾರ ನೀಡುವ ಕಾರ್ಯದಲ್ಲಿ ಕೂಡಲೇ ಸರ್ಕಾರ ಮುಂದಾಗಬೇಕು. ಸರ್ವೇ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸಿ ಸಂತ್ರಸ್ತರ ಬದುಕನ್ನು ಮರು ನಿರ್ಮಾಣ ಮಾಡಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾನವೀಯತೆಯಿಂದ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಹೊಸ ಬದಕನ್ನು ನಿರ್ಮಿಸಬೇಕು. ಪಶುಭಾಗ್ಯ ಯೋಜನೆ ಹಾಗೂ ಕೃಷಿ ಇಲಾಖೆಯ ಯೋಜನೆಗಳಿಂದ ಸಂಕಟಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡಬೇಕು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆಯಾಗಿ ಮಂತ್ರಿಮಂಡಲ ರಚನೆಯಾಗಿದೆ. ನೆರೆ ಸಂತ್ರಸ್ತರು ಪರಿಹಾರದ ಕಾರ್ಯಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ತಾವು ತಮ್ಮ ಸಚಿವ ಸಂಪುಟದೊಂದಿಗೆ ಸಂತ್ರಸ್ತರ ಸಮಸ್ಯೆಗಳಿಗೆ ಪ್ರಥಮ ಆಧ್ಯತೆಯನ್ನು ನೀಡಬೇಕು. ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾಯದೇ ರಾಜ್ಯದಿಂದ ಸೂಕ್ತ ಪರಿಹಾರವನ್ನು ಒದಗಿಸಿ ನೆರೆ ಸಂತ್ರಸ್ತರು ಚೇತರಿಸಿಕೊಳ್ಳುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ಹೊಸದುರ್ಗದ ಚಿನ್ಮೂಲಾದ್ರಿ ಶ್ರೀ ಭಗೀರಥ ಪೀಠದ ಡಾ|| ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಮಾತನಾಡಿ, ಈ ಶತಮಾನದ ಬೀಕರ ಮಹಾಮಳೆಯಿಂದ ಉತ್ತರ ಕರ್ನಾಟಕ ಜನತೆ ತತ್ತರಿಸಿಹೋಗಿದ್ದು, ಜನ-ಜಾನುವಾರು, ಬೆಳೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಅಕ್ಷರಶ: ಬೀದಿಗೆ ಬಿದ್ದಿದ್ದಾರೆ. ಅವರ ನೆರವಿಗೆ ಇಡಿ ನಾಡಿನ ಜನತೆ ನಿಂತಿದ್ದಾರೆ. ಸರ್ಕಾರವು ಕೂಡಾ ನಿಧಾನ ಮಾಡದೇ ತ್ವರಿತ ಗತಿಯಲ್ಲಿ ಕೊಡಗಿನ ನಿರಾಶ್ರೀತರಿಗೆ ಬದುಕನ್ನು ಕಲ್ಪಿಸಿದಂತೆ ಇಲ್ಲಿಯೂ ಸಂತ್ರಸ್ತರ ಬದಕನ್ನು ಹಸನಗೊಳಿಸುವಲ್ಲಿ ಶ್ರಮಿಸಬೇಕು. ನಾವು ಕೂಡಾ ನಮ್ಮ ಶ್ರೀಮಠದ ಭಕ್ತಾಧಿಗಳ ನೆರವಿನಿಂದ ಸಂತ್ರಸ್ತರಿಗೆ ನೆರವಿನೊಂದಿಗೆ ಅವರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡುತ್ತೀದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ್ಪಾರ ಸಂಘದ ಕಾರ್ಯಾಧ್ಯಕ್ಷ ಲಕ್ಷ್ಮಣ ಉಪ್ಪಾರ, ಪ್ರಧಾನ ಕಾರ್ಯದರ್ಶಿ ಯು.ವೆಂಕೋಬಾ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕಮಲಾ ಜೇಡರ, ಯುವ ಘಟPದ ರಾಜ್ಯಾಧ್ಯಕ್ಷ ಭರಮಣ್ಣ ಉಪ್ಪಾರ, ಸ್ಪರ್ಧಾಸ್ಪೂರ್ತಿ ಮುಖ್ಯಸ್ಥ ಲಕ್ಷ್ಮಣ ಉಪ್ಪಾರ, ಸತೀಶ ಮುರಗೋಡ, ಎಸ್.ಬಿ.ಹಾವನ್ನವರ, ಸ್ಥಳೀಯ ಮುಖಂಡರಾದ ರಾಮಣ್ಣ ತೋಳಿ, ಅಡಿವೆಪ್ಪ ಕಿತ್ತೂರ, ಪರಸಪ್ಪ ಚೂನನ್ನವರ, ಎಲ್.ಎನ್.ಬೂದಿಗೊಪ್ಪ, ಕುಶಾಲ ಗುಡೇನ್ನವರ, ಎಮ್.ಎ.ತಹಶೀಲದಾರ, ವಾಯ್.ಎಲ್.ಹೆಜ್ಜೆಗಾರ, ಅಲ್ಲಪ್ಪ ಕಂಕಣವಾಡಿ ಸೇರಿದಂತೆ ಅನೇಕರು ಇದ್ದರು.
ನಂತರ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿ ಸಾಂತ್ವನ ಹೇಳಿದರು.