ಗೋಕಾಕ:ಇಷ್ಟಾರ್ಥ ಇಡೇರಿಸುವ ಜಾಗೃತ ಕಲ್ಲೋಳಿ ಹನುಮಂತ ದೇವರು.!
ಇಷ್ಟಾರ್ಥ ಇಡೇರಿಸುವ ಜಾಗೃತ ಕಲ್ಲೋಳಿ ಹನುಮಂತ ದೇವರು.!
*ಅಡಿವೇಶ ಮುಧೋಳ. ಬೆಟಗೇರಿ
ಬೆಳಗಾವಿ ಜಿಲ್ಲೆಯ ಗೋಕಾಕ ಸಮೀಪದ ಸುಕ್ಷೇತ್ರ ಕಲ್ಲೋಳಿ ಪಟ್ಟಣದ ಹನುಮಂತ ದೇವರ ಕಾರ್ತಿಕೋತ್ಸವ, ಪಲ್ಲಕ್ಕಿ ಉತ್ಸವ, ಜಾತ್ರಾ ಮಹೋತ್ಸವ ಇದೇ ಶನಿವಾರ ಡಿ. 22 ರಿಂದ 29ರವರೆಗೆ ಜರುಗಲಿದೆ ತನ್ನನಿಮಿತ್ತ ಈ ಲೇಖನ.
ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾಕ ನಗರದಿಂದ ಉತ್ತರ ಭಾಗದಲ್ಲಿ ಸುಮಾರು 12 ಕಿ.ಮೀ ದೂರದಲ್ಲಿರುವ ಸುಕ್ಷೇತ್ರ ಕಲ್ಲೋಳಿ ಪಟ್ಟಣಕ್ಕೆ ಐತಿಹಾಸಿಕ ಇತಿಹಾಸವಿದೆ. ಇಲ್ಲಿ ಪುರಾತನ ಕಾಲದ ರಾಮಲಿಂಗೇಶ್ವರ, ಜೈನ ಬಸತಿ ಸೇರಿದಂತೆ ಕೆಲವು ದೇವಾಲಯಗಳು ಕಲ್ಲಿನಲ್ಲಿ ಕಟ್ಟಿದ ಭವ್ಯ ವೈಭವ ಶೈಲಿಯ ಸಾರುವ ಐತಿಹಾಸಿಕ ಇತಿಹಾಸಗಳನ್ನೂಳಗೊಂಡ ಧಾರ್ಮಿಕ ದೇವಾಲಯಗಳಲ್ಲಿ ಪ್ರಸಿದ್ಧ ಜಾಗೃತ ಹನುಮಂತ ದೇವರ ದೇವಾಲಯವೂ ಒಂದು.
ಕಲ್ಲೋಳಿ ಪಟ್ಟಣದ ಪಕ್ಕದಲ್ಲಿ ಕರಿಕಲ್ಲಿನ ಹಾಸಿಗೆ ಮೇಲೆ ಇಂದ್ರವೇಣಿ ಹೆಸರಿನ ಪುಣ್ಯ ನದಿ ಹರಿದಿದ್ದರಿಂದ ಪಟ್ಟಣಕ್ಕೆ ಕಲ್ಲುಹೋಳಿ, ಕಲ್ಲೋಳಿ ಎಂಬ ಹೆಸರು ರೂಪಾಂತರವಾಗಿರಬಹುದು. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಜನರಿಗೆ ಇಂದ್ರವೇಣಿ ಜೀವನದಿಯಾಗಿದೆ. ಅಲ್ಲದೇ ಕಲ್ಲೋಳಿ ಕುಂತಳನಾಡಿನ ರಟ್ಟ ವಂಶದ ದೊರೆಗಳ ಮುಖ್ಯ ಧಾರ್ಮಿಕ ಕೇಂದ್ರ ಸ್ಥಳವಾಗಿತ್ತು ಎನ್ನಲಾಗಿದೆ. ಕಲ್ಲೋಳಿ ಪಟ್ಟಣಕ್ಕೆ ಐತಿಹಾಸಿಕ ಇತಿಹಾಸ ಹೊಂದಿದ ಸಾಕಷ್ಟು ಇತಿಹಾಸದ ಪುರಾವೆಗಳಿವೆ. ಹೀಗಾಗಿ ಇಂದಿಗೂ ಸುತ್ತಲಿನ ಹತ್ತೂರಿಗೆ ಮಾರುಕಟ್ಟೆಯ ಪ್ರಮುಖ ಕೇಂದ್ರ ಸ್ಥಳವಾಗಿದೆ.
ಹಲವು ಶತಮಾನಗಳ ಹಿಂದೆ ಸಮರ್ಥ ರಾಮದಾಸರ ಕಾಲದಲ್ಲಿ ಕಲ್ಲೋಳಿಯ ಹನುಮಪ್ಪನ ಗುಡಿ ನಿರ್ಮಾಣಗೊಂಡಿದೆ ಎನ್ನಲಾಗುತ್ತಿದೆ. ರಾಮದಾಸರು ಮೂಲತ: ಮಹಾರಾಷ್ಟ್ರದಿಂದ ಬಂದವರಾಗಿದ್ದರಿಂದ ಈಗಲೂ ಸಹ ಇಲ್ಲಿಯ ಹನುಮಂತ ದೇವರ ದೇವಾಲಯಕ್ಕೆ ಪುಣೆ, ಕರಾಡ ಸೇರಿದಂತೆ ಮಹಾರಾಜ್ಯದ ಕೇಲವು ಜಿಲ್ಲೆ, ತಾಲೂಕು, ನಗರ, ಪಟ್ಟಣ, ಹಳ್ಳಿಗಳಿಂದ ಸಾವಿರಾರು ಜನ ಭಕ್ತರು ಹನುಮಂತ ದೇವರ ದರ್ಶನಕ್ಕೆ ಬಂದು ಹೋಗುತ್ತಾರೆ. ಇಲ್ಲಿಯ ಜನತೆಗೆ ಆರಾಧ್ಯ ದೇವರು, ಭಕ್ತರಿಗೆ ಬೇಡಿದ ವರ ನೀಡುವ ಕಲ್ಲೋಳಿ ಹನುಮಂತ ದೇವರ ಆಳೇತ್ತರ ಭವ್ಯ ಮೂರ್ತಿ ಆಕರ್ಷಣಿಯವಾಗಿದೆ. ಉತ್ತರ ಭಾರತ ಶೈಲಿಯ ಕಲೆಯಲ್ಲಿ ಕಂಗೊಳಿಸುತ್ತಿದೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯದ ಅನೇಕ ಜನ ಭಕ್ತರು ಮಾರುತಿ ದೇವರನ್ನು ತಮ್ಮ ಮನೆ ದೇವರನ್ನಾಗಿ ಮಾಡಿಕೊಂಡು, ದೇವರ ದರ್ಶನ, ಸೇವೆ ಸಲ್ಲಿಸಲು ಸಂಪ್ರದಾಯ ರೂಢಿಸಿಕೊಂಡಿದ್ದಾರೆ.
ಅಂದು ಹನುಮಪ್ಪನ ಮೂರ್ತಿ ಹುತ್ತದಿಂದ ಎದ್ದು ಬರದೇ ಇದ್ದಾಗ, ಸ್ವಪ್ನದಲ್ಲಿ ಮಾರುತಿ ದೇವರು ಇಲ್ಲಿಯೇ ಪ್ರತಿಷ್ಠಾಪಿಸಬೇಕೆಂದು ಸೂಚಿಸಿದ ಹಿನ್ನಲೆಯಲ್ಲಿ ಸಮರ್ಥ ರಾಮದಾಸರು ಮೂರ್ತಿ ಸ್ಥಾಪನೆಗೆ ಮುಂದಾದರು ಎನ್ನಲಾಗಿದೆ. ಜತೆಗೆ ರಾಮದಾಸರು ಗರ್ಭ ಗುಡಿಯ ಬಲಭಾಗದಲ್ಲಿ ಉಗ್ರ ಸ್ವರೂಪಿಣಿ ಲಕ್ಷ್ಮೀ ದೇವಿ(ಚೌಡೇಶ್ವರಿ), ಎಡಭಾಗದಲ್ಲಿ ವಿಘ್ನನಿವಾರಕ ಗಣಪತಿಯ ಮೂರ್ತಿ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ ಹೀಗಾಗಿ ಕಲ್ಲೋಳಿ ಹನುಮಪ್ಪ ಬೆಳಗಾವಿ ಜಿಲ್ಲೆಯಲ್ಲಿಯೇ ಅತ್ಯಂತ ಪ್ರಸಿದ್ದ ಜಾಗೃತ ದೇವಾಲಯವಾಗಿ ಗುರುತಿಸಿಕೊಂಡಿದೆ.
ಜಾಗೃತ ಹನುಮಪ್ಪನ ಗರ್ಭಗುಡಿಯ ಎದುರು ಚತುರ್ಗಜಗಳ ಭವ್ಯ ಹಾಗೂ ಎತ್ತರವಾದ ದ್ವೀಪಸ್ತಂಭ ಮನಮೊಹಕವಾಗಿದೆ. ಮಾರುತಿ ದೇವರ ಪೂಜಾ ತೀರ್ಥಜಲ ಹಾಗೂ ಲಿಂಗದ ಪೂಜಾ ತೀರ್ಥ ಅತ್ಯಂತ ಪವಿತ್ರವಾಗಿದೆ. ಋಷಿ ಮುನಿಗಳು ಮಂತ್ರ ಸಿದ್ದಿಯುಕ್ತವಾಗಿ ಸ್ಥಾಪಿಸಿಲ್ಪಟ್ಟ ನಾಲ್ಕು ಅಡಿ ಎತ್ತರದ ಲಿಂಗದ ಪೂಜೆ ತೀರ್ಥಜಲವನ್ನು ಇಂದಿಗೂ ಸಹ ಹಾವು, ಚೇಳು, ನಾಯಿ ಕಚ್ಚಿದರೆ ನಂಜು ನಿವಾರಕ ತೀರ್ಥವಾಗಿ ಪ್ರತಿ ಗುರುವಾರ, ಭಾನುವಾರ ನೀಡುವ ಸಂಪ್ರದಾಯವಿದೆ.
ಗುಡಿಗೆ ಬೃಹತ್ ಗ್ರಾತ್ರದ ದ್ವಾರವಿದ್ದು, ಅದರೊಳಗೆ ಚಿಕ್ಕ ಜಿಡ್ಡಿ ಬಾಗಿಲುವಿದೆ. ಅದರ ಮುಂದೆ ಬೊರ್‍ಗಲ್ ಇದೆ. ಚಿಕ್ಕ ಜಿಡ್ಡಿ ಬಾಗಿಲಿನಿಂದ ಒಳಗೆ ಪ್ರವೇಶಿಸಿ, ಬೊರ್‍ಗಲ್‍ಗೆ ಬೆನ್ನುತಾಗಿ ತಿಕ್ಕಿದರೆ ಬೆನ್ನು, ಸೊಂಟ ನೋವು, ಉಸಿರುಕಟ್ಟುವುದು ನಿವಾರಣೆಯಾಗುತ್ತದೆ ಅಲ್ಲದೇ ಹನುಮಪ್ಪ ದೇವರ ಬೃಹತ್ ಪಾದುಕೆಗಳಿವೆ. ಅವುಗಳನ್ನು ಭಕ್ತರು ತಲೆ, ಬೆನ್ನು, ತಲೆಯ ಮೇಲೆ ಇಟ್ಟುಕೊಂಡು ಆರ್ಶೀವಾದ ಪಡೆದರೆ ಹಲವು ರೋಗ ನಿವಾರಣೆ ದೊರವಾಗುತ್ತದೆ ಎಂಬ ನಂಬಿಕೆ ಭಕ್ತ ಜನರಲ್ಲಿದೆ.
ಸಂಭ್ರಮದ ಕಾರ್ತಿಕೋತ್ಸವ: ಗೋಕಾಕ ಸಮೀಪದ ಪುಣ್ಯಕ್ಷೇತ್ರ ಕಲ್ಲೋಳಿ ಹನುಮಪ್ಪನ ಕಾರ್ತಿಕೋತ್ಸವ, ಪಲ್ಲಕ್ಕಿ ಉತ್ಸವ, ಜಾತ್ರಾ ಮಹೋತ್ಸವ ಇದೇ ಶನಿವಾರ ಡಿ. 22 ರಿಂದ ಶನಿವಾರ ಡಿ.29ರವರೆಗೆ ಅಸಂಖ್ಯಾತ ಭಕ್ತರ ಮಧ್ಯೆ ಶ್ರೇದ್ಧೆ, ಭಕ್ತಿಯಿಂದ ಜರುಗಲಿದೆ. ಬೆಳಗಾವಿ ಜಿಲ್ಲೆಯ ವಿವಿಧ ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಳ ಅಸಂಖ್ಯಾತ ಭಕ್ತರು ಸೂರ್ಯ ಉದಯಕ್ಕೂ ಮುನ್ನ ಪಾದ ಯಾತ್ರೆ ಮೂಲಕ ಆಗಮಿಸಿ ವಿಶೇಷ ಪೂಜೆ, ಹರಕೆ ಸಲ್ಲಿಸುತ್ತಾರೆ. ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿವೆ. ರವಿವಾರ ಡಿ.23 ರಂದು ಮಧ್ಯಾಹ್ನ 1 ಗಂಟೆಗೆ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಲ್ಲೋಳಿ ಪಟ್ಟಣದ ಹನುಮಂತ ದೇವರ ಟ್ರಸ್ಟ್ ಕಮಿಟಿ ಪ್ರಕಟನೆಯಲ್ಲಿ ತಿಳಿಸಿದೆ.
