ಗೋಕಾಕ:ಕೌಜಲಗಿಯಲ್ಲಿ ಟಿಪ್ಪು ಸುಲ್ತಾನ ಜಯಂತಿ ಆಚರಣೆ
ಕೌಜಲಗಿಯಲ್ಲಿ ಟಿಪ್ಪು ಸುಲ್ತಾನ ಜಯಂತಿ ಆಚರಣೆ
ಕೌಜಲಗಿ ನ 11 : ಮೈಸೂರು ಹುಲಿ ಟಿಪ್ಪು ಸುಲ್ತಾನ ಒರ್ವ ನಾಡಪ್ರೇಮಿ; ದೇಶಿ ಸಂಸ್ಥಾನಗಳ ಮಹಾನ್ ರಕ್ಷಕ. ಐತಿಹಾಸಿಕ ವೀರ ವ್ಯಕ್ತಿಯಾಗಿದ್ದ ಟಿಪ್ಪು ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಸಮರ ಸಾರುವುದು, ಯುದ್ಧ ತಂತ್ರಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿತ್ತು. ಯುದ್ಧ ಸಾವು-ನೋವುಗಳ ಸಂಗಮವಾದುದರಿಂದ ಹಿಂದು-ಮುಸ್ಲಿಂರೆಲ್ಲರೂ ಟಿಪ್ಪು ಸುಲ್ತಾನ ಯುದ್ಧದಲ್ಲಿ ಮಡಿದ ಸಂಗತಿಗಳನ್ನು ಇತಿಹಾಸದಲ್ಲಿ ಕಾಣುತ್ತೇವೆ ಎಂದು ಕರ್ನಾಟಕ ರಾಜ್ಯ ಕುರುಬರ ಸಂಘದ ರಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಅಭಿಪ್ರಾಯಪಟ್ಟರು .
ಟಿಪ್ಪು ಸುಲ್ತಾನ ಯುವಕ ಸಂಘದ ಆಶ್ರಯದಲ್ಲಿ ಹಜರತ್ ಟಿಪ್ಪು ಸುಲ್ತಾನರ 266 ನೇ ಜಯಂತಿ ಕಾರ್ಯಕ್ರಮವು ಶನಿವಾರ ಕೌಜಲಗಿ ಪಟ್ಟಣದ ಜಮೀಯಾ ಮಸೀದಿ ಹತ್ತಿರ ಹಾಕಿರುವ ಭವ್ಯ ವೇದಿಕೆಯಲ್ಲಿ ಜರುಗಿತು. ಸಮಾರಂಭದಲ್ಲಿ ಮುಸ್ಲಿಂ ಸಮುದಾಯದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ. ರಾಜು ಕಂಬಾರ ಅವರು ಟಿಪ್ಪು ಸುಲ್ತಾನ ಒರ್ವ ವರಪ್ರಸಾದಿ, ವೀರತನ ಟಿಪ್ಪುವಿನಲ್ಲಿ ರಕ್ತಗತವಾಗಿ ಬೆಳೆದು ಬಂದಿತ್ತು, ಸಂಸ್ಥಾನದ ಉಳಿವಿಗಾಗಿ ಹೋರಾಡಿ ಮಡಿದ ವೀರಪುರುಷ ಟಿಪ್ಪು ಸುಲ್ತಾನ ಆಗಿದ್ದರು. ಆತ ಹಿಂದೂ-ಮುಸ್ಲಂರ ಸಾಮರಸ್ಯತೆಯ ಸಂಕೇತವಾಗಿದ್ದನು. ತನ್ನ ಧರ್ಮ-ಭಾಷೆಯ ಜೊತೆಗೆ ಹಿಂದು ಧರ್ಮದ ಭಾಷೆಯ ಉಳಿವಿಗೆ ಪ್ರಯತ್ನಿಸಿದ ಪರಧರ್ಮ ಸಹಿಷ್ಣುವಾಗಿದ್ದನು. ಟಿಪ್ಪು ಸುಲ್ತಾನ ಜಯಂತಿಯ ಜೊತೆಗೆ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ಅನುಭಾವದ ಕವಿ, ತತ್ವಪದಕಾರ ಸಂತ ಶಿಶುನಾಳ ಶರೀಫರ ಜಯಂತಿಯನ್ನು ಮಾರ್ಚ 7 ರಂದು ಹಾಗೂ ಕನ್ನಡದ ನಿತ್ಯೋತ್ಸವ ಕವಿ ಕೆ.ಎಸ್.ನಿಸ್ಸಾರಮ್ಮದ ಅವರ ಸಾಹಿತ್ಯ ಕುರಿತು ಉಪನ್ಯಾಸ-ವಿಚಾರ ಸಂಕಿರಣಗಳನ್ನು ಸ್ಥಳೀಯ ಟಿಪ್ಪು ಸುಲ್ತಾನ ಯುವಕ ಸಂಘದವರು ಏರ್ಪಡಿಸಬೇಕೆಂದು ಡಾ. ಕಂಬಾರ ಸಲಹೆ ನೀಡಿದರು.
ಜಕೀರಸಾಬ ಜಮಾದಾರ ಟಿಪ್ಪು ಸುಲ್ತಾನ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಮುಖಂಡರಾದ ಶಿವಾನಂದ ಲೋಕನ್ನವರ, ಗ್ರಾ.ಪಂ. ಅಧ್ಯಕ್ಷ ನೀಲಪ್ಪ ಕೇವಟಿ, ಕೆ.ಎಸ್.ಆರ್.ಟಿ.ಸಿ. ನಿಯಂತ್ರಣಾಧಿಕಾರಿ ಆದಂಸಾಬ ಜಮಾದಾರ, ಹಿರಿಯರಾದ ಕೇಶವ ಭೋವಿ ಟಿಪ್ಪು ಸುಲ್ತಾನರ ಕುರಿತು ಮಾತನಾಡಿದರು.
ಅಧ್ಯಕ್ಷತೆಯನ್ನು ಹಿರಿಯರಾದ ಎಂ.ಆರ್.ಭೋವಿಯವರು ವಹಿಸಿ ಮಾತನಾಡಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ದೇಶ. ಇಲ್ಲಿ ಜನ್ಮ ತಳೆದ ಪ್ರತಿಯೊಬ್ಬ ಹಿಂದು, ಮುಸ್ಲಿಂ, ಕ್ರೈಸ್ತರು ಮೊದಲಾದವರೆಲ್ಲರೂ ಪ್ರೀತಿ ಸೌಹಾರ್ದತೆಯಿಂದ ಬದುಕಬೇಕು. ಅಂತಹ ಗುಣವನ್ನು ಟಿಪ್ಪು ಸುಲ್ತಾನ ಬೆಳೆಸಿಕೊಂಡಿದ್ದರು. ಟಿಪ್ಪು ಸುಲ್ತಾನರಲ್ಲಿಯ ಕೆಚ್ಚೆದೆ ಸ್ವಾಭಿಮಾನ, ಆದರ್ಶ ತತ್ವಗಳನ್ನು ಇಂದಿನ ಯುವ ಸಮುದಾಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂತ ಶಿಶುನಾಳ ಶರೀಫರ, ಕೆ.ಎಸ್. ನಿಸ್ಸಾರಮ್ಮದರ ಸಾಹಿತ್ಯಕ ಚಿಂತನೆಗಳು ಜರುಗಬೇಕೆಂದು ಹೇಳಿದರು.
ಸಾನಿಧ್ಯವನ್ನು ಗೋಕಾಕದ ಮುಸ್ಲಿಂ ಸಮುದಾಯದ ಹಿರಿಯರಾದ ಮೌಲಾನಾ ಬಸೀರಅಹ್ಮದ ಕಾಶ್ಮೀ ಹಾಗೂ ಕೌಜಲಗಿಯ ದಸ್ತಗೀರಸಾಬ ಮುಲ್ತಾನಿ ಅವರು ವಹಿಸಿದ್ದರು.
ವೇದಿಕೆ ಮೇಲೆ ಟೆಕ್ಸಟೈಲ್ ಇಂಜಿನೀಯರ ನಾಶೀರಖಾನ, ಮಹೇಶ ಪಟ್ಟಣಶೆಟ್ಟಿ, ಸುಭಾಸ ಕೌಜಲಗಿ, ಮಹಾದೇವ ಬುದ್ನಿ, ಶ್ರೀಕಾಂತ ಪರುಶೆಟ್ಟಿ, ಅಶೋಕ ಉದ್ದಪ್ಪನವರ, ಎಂ.ಡಿ. ಖಾಜಿ, ವೆಂಕಟೇಶ ದಳವಾಯಿ, ರಮಜಾನ ಮುಲ್ತಾನಿ, ವೆಂಕಟೇಶ ದಳವಾಯಿ, ಶಂಕರ ಚಚಡಿ ಮುಂತಾದವರು ಉಪಸ್ಥಿತರಿದ್ದರು.
ಖುರಾಣ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಿಕ್ಷಕ ಎ.ಎಂ.ಮೋಡಿ ಸ್ವಾಗತಿಸಿದರು, ಮಾಲತೇಶ ಸಣ್ಣಕ್ಕಿ ಕಾರ್ಯಕ್ರಮ ನಿರೂಪಿಸಿದರು, ರಮೇಶ ಬುದ್ನಿ ವಂದಿಸಿದರು.