ಗೋಕಾಕ:ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗಬೇಕು : ಭೀಮಶಿ ಗದಾಡಿ
ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗಬೇಕು : ಭೀಮಶಿ ಗದಾಡಿ
ಗೋಕಾಕ ಮಾ 19 : ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗುವುದು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ಹೇಳಿದರು.
ರವಿವಾರದಂದು ಸಂಜೆ ಸಮೀಪದ ಪ್ರಭಾ ನಗರದಲ್ಲಿ ಹಸಿರು ಶಾಲು ದೀಕ್ಷಾ ಕಾರ್ಯಕ್ರಮದಲ್ಲಿ ಶಾಲು ದೀಕ್ಷೆಯನ್ನು ರೈತರಿಗೆ ನೀಡಿ ನಂತರ ಮಾತನಾಡಿದ ಅವರು, ದೇಶಕ್ಕೆ ಅನ್ನ ನೀಡುವ ರೈತ ತನ್ನ ಉಳಿವಿಗಾಗಿ ಇಂದು ಹೋರಾಟದ ದಾರಿಯನ್ನು ತುಳಿಯುತ್ತಿರುವುದು ವಿಪರ್ಯಾಸವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ರಾಜಕೀಯ ಪಕ್ಷಗಳು ರೈತರ ಏಳ್ಗೆಗಾಗಿ ಶ್ರಮಿಸುತ್ತೇವೆ ಎಂದು ಹೇಳಿ ಅಧಿಕಾರ ಪಡೆದು ನಂತರ ರೈತರನ್ನು ಕಡೆಗಣಿಸುತ್ತಾ ಬಂದಿದ್ದು, ಅಂತಹ ಪಕ್ಷಗಳಿಗೆ ಇಂದು ಉತ್ತರ ನೀಡಲು ನಾವೆಲ್ಲಾ ಒಂದಾಗಿ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ಹಸಿರು ಸೇನೆ ಜಿಲ್ಲಾಧ್ಯಕ್ಷ ಗಣಪತಿ ಈಳಿಗೇರ ಮಾತನಾಡಿ, ರೈತರು ಹಗಲಿರುಳು ಶ್ರಮಪಟ್ಟು ಬೆಳೆದ ಬೆಳೆಗೆ ಇಂದು ಸರಿಯಾದ ಬೆಲೆ ದೊರಕುತ್ತಿಲ್ಲ. ರೈತರ ಸಂಕಷ್ಟಗಳಿಗೆ ನೆರವಾಗಲು ಸರ್ಕಾರಗಳು ಮುಂದೆ ಬರದೆ ಮೀನಾಮೇಷವೆಣಿಸುತ್ತಿರುವ ಸರ್ಕಾರಗಳಿಗೆ ತಕ್ಕಪಾಠ ಕಲಿಸಲು ನಾವಿಂದು ಒಗ್ಗಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಭಾ ನಗರದ 60 ಕ್ಕೂ ಹೆಚ್ಚು ರೈತರಿಗೆ ಶಾಲು ದೀಕ್ಷೆಯನ್ನು ನೀಡಿ ರೈತ ಸಂಘಕ್ಕೆ ಬರಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಿದ್ದಲಿಂಗ ಪೂಜೇರಿ, ಮುತ್ತೆಪ್ಪ ಕುರುಬರ, ಮಲ್ಲಿಕಾರ್ಜುನ ಈಳಿಗೇರ, ಜಗದೀಶ ಅಗಸರ, ವಿನಾಯಕ ಧರ್ಮಶಾಲಿ, ದೇವಾನಂದ ಮಾಳಂಗಿ, ಹಣಮಂತ ಈರಪ್ಪಗೋಳ, ಗೋಪಾಲ ಬಿಲಕುಂದಿ, ಲಕ್ಷ್ಮಣ ಗುಡದಾರ, ಪ್ರವೀಣ ಘೋರ್ಪಡೆ, ಭೀಮು ಈರಪ್ಪಗೋಳ, ನಾರಾಯಣ ಜಾಧವ ಸೇರಿದಂತೆ ಅನೇಕರು ಇದ್ದರು.
