ಗೋಕಾಕ:ಮನುಷ್ಯನನ್ನು ಮಾನವನನ್ನಾಗಿ ಮಾಡುವುದೇ ನಿಜವಾದ ಧರ್ಮ : ಬಸವ ಪ್ರಭು ಸ್ವಾಮೀಜಿ

ಮನುಷ್ಯನನ್ನು ಮಾನವನನ್ನಾಗಿ ಮಾಡುವುದೇ ನಿಜವಾದ ಧರ್ಮ : ಬಸವ ಪ್ರಭು ಸ್ವಾಮೀಜಿ
ಗೋಕಾಕ ಸೆ 10 : ಮನುಷ್ಯನನ್ನು ಮಾನವನನ್ನಾಗಿ ಮಾಡುವುದೇ ನಿಜವಾದ ಧರ್ಮವಾಗಿದ್ದು, ಆತ ಧರ್ಮವನ್ನು ಸರಿಯಾಗಿ ಅನುಸರಿಸಿದರೆ ಮಹಾ ಮಾನವನಾಗುತ್ತಾನೆ ಎಂದು ಪೂಜ್ಯ ಬಸವಪ್ರಭು ದೇವರು ಹೇಳಿದರು.
ರವಿವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ, ಲಿಂಗಾಯತ ಮಹಿಳಾ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 189ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಗುರು-ಶಿಷ್ಯ ಪರಂಪರೆ ಜಗತ್ತಿಗೆ ಮಾದರಿಯಾಗಿದ್ದು, ಅದಕ್ಕಾಗಿ ಭಾರತ ವಿಶ್ವಗುರು ಎಂದು ಗುರುತಿಸಿಕೊಂಡಿದೆ. ಪೂರ್ವ ಜನ್ಮದ ಪುಣ್ಯದ ಫಲವಾಗಿ ಒಳ್ಳೆಯ ಗುರುಗಳು ಸಿಗುತ್ತಾರೆ ಅವರ ಮಾರ್ಗದರ್ಶನದಲ್ಲಿ ಸತ್ಕಾರ್ಯಗಳನ್ನು ಮಾಡುತ್ತ ಜೀವನ ನಡೆಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ “ಭಾರತೀಯ ಗುರು ಶಿಷ್ಯ ಪರಂಪರೆ” ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ
ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಮ ವಿದ್ಯಾರ್ಥಿನಿ ಕುಮಾರಿ ಅಮೃತಾ ಮಿರ್ಜಿ, ದ್ವಿತೀಯ ಸ್ಥಾನ ಪಡೆದ ಕುಮಾರಿ ಪ್ರಣತಿ ಬಾನೆ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಕುಮಾರಿ ಪೂರ್ವಾ ದೊಡ್ಡಮನಿ ಅವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ವಹಿಸಿದ್ದರು.
ವೇದಿಕೆಯ ಮೇಲೆ ಬಸನಗೌಡ ಪಾಟೀಲ್, ಡಾ. ಸಿ. ಕೆ. ನಾವಲಗಿ, ರಾಮಚಂದ್ರ ಕಾಕಡೆ, ಶ್ರೀಮತಿ ಭಾರತಿ ಮರೆನ್ನವರ, ಮಹಾದೇವಪ್ಪ ಈಟಿ, ಮಹಾದೇವಯ್ಯ ಅಪ್ಪಯ್ಯ ಹಿರೇಮಠ, ಶ್ರೀಮತಿ ಮಾಲತಿ ದುಂಡಪ್ಪ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ಆರ್. ಎಲ್. ಮಿರ್ಜಿ ಕಾರ್ಯಕ್ರಮ ನಿರೂಪಿಸಿದರು, ಎಸ್. ಕೆ. ಮಠದ ವಂದಿಸಿದರು.