RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಇಂದು ನೆಡುವ ಗಿಡ ಮುಂದಿನ ಹತ್ತು ವರ್ಷದ ನಂತರದ ಪೀಳಿಗೆಗೆ ಫಲ ಕೊಡುತ್ತದೆ : ಡಿ.ಎಫ್.ಓ ದೇವರಾಜ್

ಗೋಕಾಕ:ಇಂದು ನೆಡುವ ಗಿಡ ಮುಂದಿನ ಹತ್ತು ವರ್ಷದ ನಂತರದ ಪೀಳಿಗೆಗೆ ಫಲ ಕೊಡುತ್ತದೆ : ಡಿ.ಎಫ್.ಓ ದೇವರಾಜ್ 

ಇಂದು ನೆಡುವ ಗಿಡ ಮುಂದಿನ ಹತ್ತು ವರ್ಷದ ನಂತರದ ಪೀಳಿಗೆಗೆ ಫಲ ಕೊಡುತ್ತದೆ : ಡಿ.ಎಫ್.ಓ ದೇವರಾಜ್

ಗೋಕಾಕ ಜು 15 : ಇಂದು ನೆಡುವ ಗಿಡ ಮುಂದಿನ ಹತ್ತು ವರ್ಷದ ನಂತರದ ಪೀಳಿಗೆಗೆ ಫಲ ಕೊಡುತ್ತದೆ, ಮರವಿದ್ದರೆ ಉಸಿರು, ನಮ್ಮ ಜೀವನ ಎಂದು ಗೋಕಾಕ ಉಪ ವಲಯ ಅರಣ್ಯ ಸಂರಕ್ಷಾಧಿಕಾರಿ ( ಡಿ.ಎಫ್. ಓ ) ದೇವರಾಜ್ ತಿಳಿಸಿದರು.

ಗೋಕಾಕ ತಾಲೂಕು ಕೈತನಾಳ ನಿರುಪಾಧೀಶ್ವರ ಮಠದ ಆವರಣದಲ್ಲಿ ಇಂದು ನಡೆದ ವನಮಹೋತ್ಸವ ಕಾರ್ಯಕ್ರಮದ ನಂತರ ಮಾತನಾಡಿ ಅರಣ್ಯ ಮತ್ತು ಗ್ರಾಮಸ್ಥರ ನಡುವೆ ಅನ್ಯೋನ್ಯತೆ ಬಹಳವಿದ್ದಾಗಲೇ ಅರಣ್ಯ ಬೆಳೆಯಲು ಸಾಧ್ಯ. ಮಳೆಯಿಲ್ಲದೇ ಇಂದು ನದಿ, ಕೆರೆ, ಕಟ್ಟಿ ತುಂಬುತ್ತಿಲ್ಲ. ದೇಶದಲ್ಲಿದ್ದ 50 ಕೋಟಿ ಜನಸಂಖ್ಯೆ ಈಗ 130 ಕೋಟಿ ಆಗಿದೆ. ಮಾನವ ಅವಶ್ಯಕತೆಗಳು ಈಗ ಹೆಚ್ಚಾಗಿದೆ. ನೀರಿನ ಬೇಡಿಕೆ ಹೆಚ್ಚಿದ್ದರೂ, ಅಷ್ಟು ಅಮೂಲ್ಯ ನೀರು ಇಂದು ಸಿಗುತ್ತಿಲ್ಲ. ಪ್ರಾಮಾಣಿಕ ನೀರಿನ ಬಳಕೆ ಮಾಡುವುದನ್ನು ನಾವು ಕಲಿಯಬೇಕು. ಅಂತರ್ಜಲದ ಅತಿಯಾದ ಬಳಕೆಯಿಂದ ಸಹ ನೀರು ಖಾಲಿಯಾಗಿದೆ.

ನೀರಿಗಾಗಿ ಅರಣ್ಯ, ಕೋಟಿ ವೃಕ್ಷ  : ನೂತನ ಕಾರ್ಯಕ್ರಮ ಕರ್ನಾಟಕ ಸರಕಾರ ಹಮ್ಮಿಕೊಂಡಿದೆ.
ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಭವನೆಯ ಆತಂಕ ಆಡಳಿತಕ್ಕೆ ಹೆಚ್ಚಿದೆ. ಉಸಿರಾಡಲು ಗಾಳಿ, ಆಮ್ಲಜನಕವಿಲ್ಲದಂಥ ಪರಿಸ್ಥಿತಿ ಇಂದು ಬಂದಿದೆ. ದೊಡ್ಡ ನಗರಗಳಲ್ಲಿ ಆಮ್ಲಜನಕ ಪಾರ್ಲರ್ ಗಳು ಹುಟ್ಟಿಕೊಂಡಿವೆ ಎಂದು ಡಿಸಿಎಫ್ ಆತಂಕ ವ್ಯಕ್ತಪಡಿಸಿದರು. ಮಳೆಯಾಧಾರಿತ ಕೃಷಿ ಮಾಡುವ ಭಾರತಕ್ಕೆ ನೀರಿನ ಇತಿಮಿತಿ ಬಳಕೆ ಅತ್ಯಾವಶ್ಯಕವಾಗಿದೆ. ರೈತರು ತಮ್ಮ ಹೊಲದ ಖಾಲಿ ಜಾಗೆಗಳಲ್ಲಿ ಸಾಕಷ್ಟು ಮರ ನೆಡಬೇಕು. ಮಳೆ ಕೊರತೆಯ ಈ ಸಂದರ್ಭ ಕೃಷಿ ಅರಣ್ಯ ದಂಥ ಹೊಸ ಪ್ರಯೋಗಕ್ಕೆ ಬರಲಿದೆ. ರೈತರು ಕೃಷಿ ಪ್ರೋತ್ಸಾಹ ಯೋಜನೆಯಡಿ ಗಿಡ ನೆಡಬೇಕೆಂದು ಡಿಸಿಎಫ್ ಕರೆ ನೀಡಿದರು. ಕೈತನಾಳ ನಿರುಪಾಧೀಶ್ವರ ಮಠದ ಆವರಣದಲ್ಲಿ ದೈವಿ ವನ ನಿರ್ಮಾಣ ಅರಣ್ಯ ಇಲಾಖೆ ವತಿಯಿಂದ ಮಾಡಿ ಕೊಡಲಾಗುವುದು, ಈ ಬಗ್ಗೆ ಸಿಸಿಎಫ್ ಅವರೊಂದಿಗೆ ತತಕ್ಷಣ ಚರ್ಚೆ ಮಾಡಲಾಗುವುದು ಎಂದು ಡಿಸಿಎಫ್ ದೇವರಾಜ್ ತಿಳಿಸಿದರು.

ಮಠದ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಪರಿಸರ ಎಂದರೆ ನಮ್ಮ ಉಸಿರು, ನಮ್ಮ ಮನೆಯ ಉತ್ತಮ ವಾತಾವರಣ ನಮ್ಮನ್ನು ಒಳ್ಳೆಯದು ಮಾಡುತ್ತದೆ. ಭೂಮಿಯ ಮೇಕೆ ಹಸಿರುವನ ಇರಬೇಕು. ಹೊಲವಿದ್ದು ಬದುವಿನಲ್ಲಿ ಮರವೂ ಇರಬೇಕು. ಒಂದು ಮರ ನೆಟ್ಟು ಪೋಷಿಸಿದರೆ, ನಮ್ಮ ಆಪತ್ತು ಕಾಲದಲ್ಲಿ ಅದು ನಮ್ಮ ಸಹಾಯಕ್ಕೆ ಬರುತ್ತದೆ. ರೈತರು ಮತ್ತು ಜನತೆ ಯುದ್ಧೋಪಾದಿಯಲ್ಲಿ ಗ್ರಾಮ ಗ್ರಾಮಗಳಲ್ಲಿ ರೈತರು ಗಿಡಮರ ನೆಡಬೇಕೆಂದು ಪೂಜ್ಯರು ಕರೆ ನೀಡಿದರು. ನೈಸರ್ಗಿಕವಾಗಿ ಗಿಡಮರ ಬೆಳೆಯುತ್ತಿವೆ ಹೊರತು, ನಾವೇನು ನೆಟ್ಟು ಬೆಳೆಸುತ್ತಿಲ್ಲ. ಮರವೆಂದರೆ ದೇವರು ನಮಗೆಲ್ಲ ಕೊಟ್ಟ ವರ, ಮರ ಕಡಿಯುವುದು ಮಹಾಪಾಪವೇ ಸರಿ. ಪರಿಸರ ವಿಕೋಪಕ್ಕೆ ಹೋದರೆ ಸರಕಾರವೂ ಸಹ ಅಸಹಾಯಕತೆ ಈಡಾಗುತ್ತದೆ. ಸರಕಾರ ಎಲ್ಲಿಂದ ನೀರು ಕೊಡಬಹುದು. ಪರಿಸರ ಹಾಳು ಮಾಡಿ ನಮ್ಮ ತಲೆ ಮೇಲೆ ನಾವೇ ಕಲ್ಲು ಹಾಕಿಕೊಂಡಿದ್ದೇವೆ. ರೈತರು ತಮ್ಮ ಜಮೀನಿನ ಹಾಳೆ, ಬದು ಮತ್ತು ಖಾಲಿ ಜಾಗೆಗಳಲ್ಲಿ ಕಡ್ಡಾಯವಾಗಿ ಗಿಡ ನೆಡಲೆಬೇಕು ಎಂದು ಪೂಜ್ಯರು ಒತ್ತಿ ಹೇಳಿದರು.

ಪರಿಸರ ಹಾಳು ಮಾಡಿ ಇಂದು ಬರಡಾಗಿದೆ. ಪರಿಸರ ಬೆಳೆಸುವ ಬಗ್ಗೆ ತಿಳಿಸಲು ಇಂದು ಮಠದಲ್ಲಿ ವನಮಹೋತ್ಸವ ಆಚರಿಸಲಾಗಿದೆ ಎಂದು ಬ್ರಹ್ಮಶ್ರೀ ತಿಳಿಸಿದರು. ಮರ ಹಣ್ಣು, ಆಮ್ಲಜನಕ, ತಂಪು ವಾತಾವರಣ, ಮಳೆ, ತೊಗಟೆ ಎಲ್ಲವನ್ನೂ ಕೊಡುತ್ತದೆ. ನಾವೇಕೆ ಪರಿಸರ ಹಾಳು ಮಾಡಿ ಅನರ್ಥ ಜೀವನ ಸಾಗಿಸುತ್ತಿದ್ದೇವೆ ಎಂಬ ಬಗ್ಗೆ ಸ್ವಯಂ ಚಿಂತನೆ ಮಾಡಬೇಕು ಎಂದು ಜನತೆಗೆ ತಿಳಿ ಹೇಳಿದರು. “ಮನೆಗೆ ಮಕ್ಕಳಿದ್ದರೆ ಚೆಂದ, ಊರಿಗೊಂದು ವನ ಇದ್ದರೆ ಅಂದ” ಎಂದ ಶ್ರೀಗಳು ಪ್ರತಿ ಗ್ರಾಮಕ್ಕೊಂದು ವನ ಬೆಳೆಸಲು ನೆರೆದಿದ್ದ ನೂರಾರು ಗ್ರಾಮಸ್ಥರಿಗೆ ಕೋರಿದರು. ಮಠದ ಆವರಣದಲ್ಲಿ ಸುಮಾರು 250 ಗಿಡಗಳನ್ನು ನೆಡಲಾಯಿತು. ಸೊಗಲ ಶ್ರೀ ಚಿದಾನಂದ ಮಹಾಸ್ವಾಮೀಜಿ, ಡಿ ಆರ್ ಎಫ್ ಓ ಪಿ. ಬಿ. ಶಿರಗಾಂವಕರ, ಸಂಪತ್ ಶಿಂಪಿ, ಎಂ. ಬಿ. ಹೆಬ್ಬಾಳ, ವೈ. ಎಸ್. ಕೆಂಪನ್ನವರ ಸೇರಿದಂತೆ ತವಗ, ಕೈತನಾಳ, ಮದವಾಲ ಸೇರಿದಂತೆ ಇತರ ಗ್ರಾಮಸ್ಥರು ಹಾಜರಿದ್ದರು

Related posts: