ಗೋಕಾಕ:ನದಾಫ್ ಪಿಂಜಾರ ಸಮಾಜವನ್ನು ಮುಖ್ಯ ವಾಹಿನಿ ತರಲು ಶ್ರಮಿಸಬೇಕು : ಸ್ಮಾರ್ಟ ಸೀಟಿ ಎಂ.ಡಿ. ಶಿರೀನ್ ನದಾಫ್

ನದಾಫ್ ಪಿಂಜಾರ ಸಮಾಜವನ್ನು ಮುಖ್ಯ ವಾಹಿನಿ ತರಲು ಶ್ರಮಿಸಬೇಕು : ಸ್ಮಾರ್ಟ ಸೀಟಿ ಎಂ.ಡಿ. ಶಿರೀನ್ ನದಾಫ್
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಜು 13 :
ನದಾಫ್ ಪಿಂಜಾರ ಸಮಾಜ ಶೈಕ್ಷಣಿಕವಾಗಿ ಹಿಂದುಳಿದ ಸಮಾಜವಾಗಿದ್ದು ಸಮಾಜ ಭಾಂದವರು ತಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿ ತರಲು ಶ್ರಮಿಸಬೇಕೆಂದು ಬೆಳಗಾವಿ ಸ್ಮಾರ್ಟ ಸೀಟಿ ಎಮ್‍ಡಿ ಶಿರೀನ್ ನದಾಫ್ ಹೇಳಿದರು.
ಅವರು, ಶುಕ್ರವಾರದಂದು ಇಲ್ಲಿಯ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಮಾಜದ ಜಿಲ್ಲಾ ಘಟಕದ ಸಭೆಯನ್ನುದ್ದೇಶಿಸಿ ಮಾತನಾಡಿ, ಅಲ್ಪ ಸಂಖ್ಯಾತರಲ್ಲಿ ಅತ್ಯಧಿಕ ಜನಸಂಖ್ಯೆಯಿದ್ದರೂ ನದಾಫ್ ಪಿಂಜಾರ ಸಮುದಾಯದ ಜನ ಅತ್ಯಂತ ಹಿಂದುಳಿದಿದೆ ಎಂದು ಪರಿಗಣಿಸಲ್ಪಟ್ಟಿದೆ ಎಂದರು.
ಜಿಲ್ಲಾಧ್ಯಕ್ಷ ನಜೀರ್ ಶೇಖ ಮಾತನಾಡಿ, ದೇಶದ ಉದ್ದಗಲಕ್ಕೂ ನದಾಫ್, ಪಿಂಜಾರ, ಪಿಂಜಾರಿ, ದೊದೆಕೊಲ, ಲದಾಫ್ ಎಂದು ವಿವಿಧ ಹೆಸರುಗಳಲ್ಲಿ ಕರೆಯಲ್ಪಡುವ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಯಬೇಕಿದೆ. ಸಮಾಜದ ಜನ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದರು
ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ದಿ. ಎಚ್. ಇಬ್ರಾಹಿಂಸಾಬ ಅವರ ಉತ್ತಮ ನಾಯಕತ್ವದಿಂದ ನಮಗೆ ಮಿಸಲಾತಿಯಲ್ಲಿ ಪ್ರವರ್ಗ-1 ದೊರಕಿದೆ. ಸಮಾಜಕ್ಕಾಗಿ ಅವರ ಪರಿಶ್ರಮ ಹೋರಾಟ ಅವಿಸ್ಮರಣೀಯ ಎಂದು ನೆನಪಿಸಿಕೊಂಡರು.
ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ನೂತನ ರಾಜ್ಯಾಧ್ಯಕ್ಷ ಜಲೀಲಅಹ್ಮದ ಅವರನ್ನು ಜಿಲ್ಲಾ ಘಟಕದಿಂದ ಸತ್ಕರಿಸಲಾಯಿತು.
ವೇದಿಕೆಯ ಮೇಲೆ ರಾಜ್ಯ ಮುಖಂಡ ಖಲಂದರ್‍ಸಾಬ, ಜಿಲ್ಲಾಧ್ಯಕ್ಷ ನಜೀರ್ ಶೇಖ, ಕಾರ್ಯದರ್ಶಿ ಮಾಜಿ ಜಿಲ್ಲಾಧ್ಯಕ್ಷ ಆರ್ ವಿ ನದಾಫ್, ಗೋಕಾಕ ತಾಲೂಕಾಧ್ಯಕ್ಷ ಮೀರಾಸಾಬ ನದಾಫ್, ಮುಸ್ತಾಕ ನದಾಫ್, ಇಕ್ಬಾಲ ನದಾಫ್, ಯೂನುಸ್ ನದಾಫ್, ದಸ್ತಗೀರಸಾಬ ನದಾಫ್ ಸೇರಿದಂತೆ ಜಿಲ್ಲಾ ಘಟಕ ಹಾಗೂ ತಾಲೂಕ ಘಟಕಗಳ ಪದಾಧಿಕಾರಿಗಳು, ಸಮಾಜ ಭಾಂದವರು ಇದ್ದರು.