RNI NO. KARKAN/2006/27779|Wednesday, October 15, 2025
You are here: Home » breaking news »

 

ಅಂತ್ಯೋದಯ ಬೇಸ್‍ಲೈನ್ ಸರ್ವೇಯಲ್ಲಿ ಟಾಪ್‍ಟೆನ್ ಪಟ್ಟಿಯಲ್ಲಿ 3 ಪಂಚಾಯತಿಗಳಿಗೆ ಸ್ಥಾನ

ಅಭಿವೃದ್ಧಿ ಏನೆಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ ಅ 20 : ಕೇಂದ್ರ ಸರ್ಕಾರದ 2018 ರ ಅಂತ್ಯೋದಯ ಬೇಸ್‍ಲೈನ್ ಸರ್ವೆಯಲ್ಲಿ ಅರಭಾವಿ ಕ್ಷೇತ್ರದ ಕುಲಗೋಡ ಗ್ರಾಮ ಪಂಚಾಯತಿಯು ದೇಶದಲ್ಲಿಯೇ ಅಗ್ರ ಸ್ಥಾನಪಡೆದಿರುವ ಹಿನ್ನೆಲೆಯಲ್ಲಿ ಪಂಚಾಯತಿ ಸಮೀತಿಯವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ಕುಲಗೋಡ ಗ್ರಾಮ ಪಂಚಾಯತಿಯ ಸರ್ವಾಂಗೀಣ ವಿಕಾಸಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿ ಕುಲಗೋಡ ಗ್ರಾಮವು ದೇಶದಲ್ಲಿಯೇ ಹೆಸರುವಾಸಿಯಾಗಲು ಕಾರಣಿಕರ್ತರಾದ ಬಾಲಚಂದ್ರ ಜಾರಕಿಹೊಳಿ ಅವರು ನೀಡಿರುವ ಕೊಡುಗೆ ಅನನ್ಯ. ಕುಲಗೋಡ ಗ್ರಾಮ ಪಂಚಾಯತಿಗೆ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ನಡೆಸಿರುವ ಸರ್ವೆಯಲ್ಲಿ ಅಗ್ರಸ್ಥಾನ ಪಡೆಯಲು ಶಾಸಕರ ಪಾತ್ರ ಮಹತ್ವದ್ದಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಅರಭಾವಿ ಕ್ಷೇತ್ರದ ಕುಲಗೋಡ, ಪಟಗುಂದಿ ಮತ್ತು ಕೌಜಲಗಿ ಗ್ರಾಮ ಪಂಚಾಯತಿಗಳು ಕ್ರಮವಾಗಿ 1, 6 ಮತ್ತು 7 ನೇ ಸ್ಥಾನ ಪಡೆದಿರುವುದು ಅಭಿವೃದ್ಧಿಯ ಧ್ಯೋತಕವಾಗಿದೆ. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ನಡೆಸಿರುವ ಬೇಸ್‍ಲೈನ್ ಸರ್ವೆಯಲ್ಲಿ 94 ಅಂಕಗಳನ್ನು ಪಡೆದಿರುವ ಕುಲಗೋಡ ಗ್ರಾಮ ಪಂಚಾಯತಿ ಸಾಧನೆಗಳನ್ನು ಶ್ಲಾಘಿಸಿದರು. ಕಳೆದ 15 ವರ್ಷಗಳಿಂದ ಅರಭಾವಿ ಮತಕ್ಷೇತ್ರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳನ್ನು ಜನರಿಗೆ ಪ್ರಾಮಾಣಿಕವಾಗಿ ಅರ್ಪಿಸಿದ್ದೇನೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಯಾವ ತಾರತಮ್ಯವನ್ನು ಮಾಡಿಲ್ಲ. ಅಭಿವೃದ್ಧಿಯಾಗಿಲ್ಲವೆಂದು ಹೇಳಿಕೊಂಡು ತಿರುಗಾಡುತ್ತಿರುವ ಕೆಲವರು ಇನ್ನಾದರೂ ಅರ್ಥಮಾಡಿಕೊಳ್ಳಬೇಕು. ಒಳ್ಳೆಯ ಜನಪರ ಕೆಲಸಕ್ಕೆ ಬೆಂಬಲ ನೀಡುವ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕೇವಲ ಭಾಷಣ ಮಾಡುವುದರಿಂದ ಹಾಗೂ ಅಪಪ್ರಚಾರ ನಡೆಸುವುದರಿಂದ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಹೆಮ್ಮೆಯ ಸಾಧನೆ ಮಾಡಲಾಗಿದೆ. ಅಭಿವೃದ್ಧಿಯೇ ತಮಗೆ ಮೂಲ ಮಂತ್ರವಾಗಿದೆ. ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಅರಭಾವಿ ಮತಕ್ಷೇತ್ರದ ಸಮಗ್ರ ಪ್ರಗತಿಗಾಗಿ ಶ್ರಮಿಸುತ್ತಿದ್ದೇನೆ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಬೆಂಬಲ ನೀಡಿದರೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಅನುಷ್ಠಾನ ಮಾಡಿದರೆ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತಿಗಳು ಇಂತಹ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಿಶನ್ ಅಂತ್ಯೋದಯ ಬೇಸ್‍ಲೈನ್ ಸಮೀಕ್ಷೆಯಲ್ಲಿ ಕುಲಗೋಡ ಗ್ರಾಮ ಪಂಚಾಯತಿಗೆ ಮೂಲ ಸೌಕರ್ಯಕ್ಕೆ 64ಕ್ಕೆ 63, ಆರ್ಥಿಕಾಭಿವೃದ್ಧಿಗೆ 4ಕ್ಕೆ 2, ಆರೋಗ್ಯ, ಸ್ವಚ್ಛತೆ ಹಾಗೂ ಪೌಷ್ಠಿಕತೆಗೆ 18ಕ್ಕೆ 18, ಮಹಿಳೆಯರ ಸಬಲೀಕರಣಕ್ಕೆ 7ಕ್ಕೆ 7 ಅಂಕಗಳನ್ನು ಪಡೆದಿದೆ. ಒಟ್ಟು ನೂರರ ಪೈಕಿ 94 ಅಂಕಗಳನ್ನು ಪಡೆದು ಅಗ್ರಸ್ಥಾನ ಪಡೆದಿರುವುದು ಹರ್ಷವನ್ನುಂಟು ಮಾಡಿದೆ. ಇದರ ಜೊತೆಗೆ ಪಟಗುಂದಿ ಹಾಗೂ ಕೌಜಲಗಿ ಗ್ರಾಮ ಪಂಚಾಯತಿಗಳು ಸಹ ಅಂತ್ಯೋದಯ ಸರ್ವೆಯಲ್ಲಿ ಟಾಪ್‍ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಅರಭಾವಿ ಕ್ಷೇತ್ರದ ಸಾಧನೆಯನ್ನು ಬಿಂಬಿಸುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ಲೇಷಿಸಿದರು.
ಹಿರಿಯ ಸಹಕಾರಿ ಅಶೋಕ ನಾಯಿಕ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಪಿಎಲ್‍ಡಿ ಬ್ಯಾಂಕ್ ಮಾಜಿ ನಿರ್ದೇಶಕ ಸುಧೀರ ವಂಟಗೋಡಿ, ಗ್ರಾಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಸುಭಾಸ ವಂಟಗೋಡಿ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಚಿಪ್ಪಲಕಟ್ಟಿ, ತಮ್ಮಣ್ಣಾ ದೇವರ, ಲಕ್ಷ್ಮಣ ನಂದಿ, ಬಸು ನಾಯಿಕ, ಯಮನಪ್ಪ ಕುರಬಚನ್ನಾಳ, ಸುಂದರವ್ವ ಹರಿಜನ, ಬಸವಂತ ಭಜಂತ್ರಿ, ಪ್ರಕಾಶ ಹಿರೇಮೇತ್ರಿ, ಹಣಮಂತ ಯರಗಟ್ಟಿ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts: