ಗೋಕಾಕ:ಡಿಸೆಂಬರ್ 31 ಒಳಗೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸಿ : ಅಶೋಕ ಪೂಜಾರಿ

ಡಿಸೆಂಬರ್ 31 ಒಳಗೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸಿ : ಅಶೋಕ ಪೂಜಾರಿ
ಗೋಕಾಕ ಡಿ 17 : ಅವಿಭಜಿತ ಬೆಳಗಾವಿ ಜಿಲ್ಲೆ ವಿಭಜನೆ ಸ್ವರೂಪ ಅಂತಿಮ ಹಂತಕ್ಕೆ ಬಂದು ನಿಂತಿದ್ದು,ಡಿಸೆಂಬರ್ 31 ಒಳಗೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಸರಕಾರವನ್ನು ಆಗ್ರಹಿಸಿದರು.
ಬುಧವಾರದಂದು ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜನೇವರಿ ಯಿಂದ ಜನಗಣತಿ ಪ್ರಾರಂಭವಾಗುತ್ತಿದ್ದು, ಮುಂದೆ ಜಿಲ್ಲೆ ವಿಂಗಡನೆ ಎರಡು ವರ್ಷ ವಿಳಂಬವಾಗಲಿದೆ ಹಾಗಾಗಿ ಆದಷ್ಟು ಬೇಗ ಮುಖ್ಯಮಂತ್ರಿಗಳು ಜಿಲ್ಲೆಯ ಶಾಸಕರ ಅಭಿಪ್ರಾಯ ಪಡೆದುಕೊಂಡು ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕು. ಸಚಿವ ಸತೀಶ ಜಾರಕಿಹೊಳಿ ಅವರು ಈಗ ಸದ್ಯ ಗೋಕಾಕ ಮತ್ತು ಚಿಕ್ಕೋಡಿ ತಾಲೂಕುಗಳನ್ನು ಮಾಡುತ್ತೇವೆ, ಇನ್ನು ಯಾವುದಾದರು ತಾಲೂಕುಗಳು ಇದ್ದರೆ ಮುಂದಿನ ದಿನಗಳಲ್ಲಿ ಅವುಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.ಕಳೆದ 4 ದಶಕಗಳಿಂದ ಹಲವಾರು ಹೋರಾಟಗಾರರು ಹಲವಾರು ರೀತಿಯ ಹೋರಾಟಗಳನ್ನು ಮಾಡಿ ಸರಕಾರಕ್ಕೆ ಹಕ್ಕೋತಾಯಗಳನ್ನು ಮಾಡಿದ್ದಾರೆ. ಜಿಲ್ಲೆಗಾಗಿ ಆಗ್ರಹಿಸಿ ಗೋಕಾಕದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಮಾಡಲು ಯೋಚನೆ ಮಾಡಲಾಗಿತ್ತು ಆದರೆ ಸಚಿವ ಸತೀಶ ಜಾರಕಿಹೊಳಿ, ಶಾಸಕರುಗಳಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಇವರ ಮೇಲೆ ಭರವಸೆ ಇಟ್ಟು ಧರಣಿ ಸತ್ಯಾಗ್ರಹವನ್ನು ಕೈಬಿಡಲಾಗಿದೆ. ಒಂದು ವೇಳೆ ಸರಕಾರ ಗೋಕಾಕ ಜಿಲ್ಲೆ ಮಾಡದೆ ಹೋದರೆ ಗೋಕಾಕದಲ್ಲಿ ಹಂತ, ಹಂತವಾಗಿ ಉಗ್ರ ಸ್ವರೂಪದ ಹೋರಾಟಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಶಶಿಧರ ದೇಮಶೆಟ್ಟಿ ಮಾತನಾಡಿ ಬೆಳಗಾವಿ ಜಿಲ್ಲೆ ವಿಂಗಡಿಸಲು ಮುಖ್ಯಮಂತ್ರಿ ಹೇಳಿದಂತೆ ಶೀಘ್ರದಲ್ಲೇ ಜಿಲ್ಲೆಯ ಎಲ್ಲಾ ಶಾಸಕರ ಸಭೆ ಕರೆದು ಅವರ ಅಭಿಪ್ರಾಯ ಪಡೆದು ಬೆಳಗಾವಿ ಜಿಲ್ಲೆಯನ್ನು ವಿಂಗಡಿಸುವ ಕ್ರಮ ಕೈಗೊಂಡು ಗೋಕಾಕ ಜಿಲ್ಲೆಯನ್ನಾಗಿ ಮಾಡಬೇಕು. ಅಧಿವೇಶನದ ಒಳಗೆ ಮಾಡದೆ ಹೋದರೆ ಅಧಿವೇಶನದ ನಂತರ ಗೋಕಾಕ ತಾಲೂಕಿನಾದ್ಯಂತ ಉಗ್ರ ಸ್ವರೂಪದ ಹೋರಾಟಗಳನ್ನು ಕೈಗೊಳ್ಳಲಾಗುವುದು ಇದಕ್ಕೆ ಸರಕಾರವೇ ಕುಮ್ಮಕ್ಕು ಕೊಟ್ಟಂತಾಗುತ್ತದೆ ಹಾಗಾಗಿ ಸರಕಾರ ಎಚ್ಚೆತ್ತುಕೊಂಡು ಕೂಡಲೆ ಗೋಕಾಕ ನೂತನ ಜಿಲ್ಲೆಯಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೋ ಅರ್ಜುನ್ ಪಂಗಣ್ಣವರ, ಡಾ.ಮಹಾಂತೇಶ ಕಡಾಡಿ, ಪ್ರಕಾಶ್ ಬಾಗೋಜಿ, ನ್ಯಾಯವಾದಿಗಳಾದ ಸಿ.ಬಿ.ಗಿಡನನ್ನವರ, ಎಂ.ಟಿ.ಪಾಟೀಲ, ಡಾ.ರಮೇಶ ಪಟ್ಟಗುಂಡಿ ಸಂಜೀವ ಪೂಜಾರಿ, ದಸ್ತಗಿರಿ ಪೈಲವಾನ ಉಪಸ್ಥಿತರಿದ್ದರು.
