ಗೋಕಾಕ:ಪ್ರವಾಹ ಹಿನ್ನೆಲೆ : ಲೋಳಸೂರ ಸೇತುವೆಗೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಭೇಟಿ : ಪರಿಶೀಲನೆ

ಪ್ರವಾಹ ಹಿನ್ನೆಲೆ : ಲೋಳಸೂರ ಸೇತುವೆಗೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಭೇಟಿ : ಪರಿಶೀಲನೆ
ಗೋಕಾಕ ಆ 20 : ಹಿಡಕಲ್ ಜಲಾಶಯದ ಒಳಹರಿವು ಹೆಚ್ಚಳವಾದ ಕಾರಣ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಬುಧವಾರದಂದು ನಗರದ ಲೋಳಸೂರ ಸೇತುವೆ, ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನೀರಾವರಿ ಇಲಾಖೆ , ಕಂದಾಯ, ಜಿಲ್ಲಾ ಪಂಚಾಯಿತಿ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಗೋಕಾಕ ತಾಲೂಕಿನಲ್ಲಿ ಸದ್ಯ ಗೋಕಾಕ ಮತ್ತು ಶಿಂಗಳಾಪೂರ ಗ್ರಾಮದ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಶಿಂಗಳಾಪೂರ ಕಾಳಜಿ ಕೇಂದ್ರದಲ್ಲಿ 21 ಜನ, ಗೋಕಾಕ ನಗರದಲ್ಲಿ ಸುಮಾರು 244 , ಜನ 42 ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದಾರೆ. ಮುಂದೆ ಇದಕ್ಕಿಂತ ಹೆಚ್ಚಿನ ಮಟ್ಟದ ಪ್ರವಾಹ ಸಂಭವಿಸಿದರೆ ನದಿ ತೀರದ ಗ್ರಾಮಸ್ಥರನ್ನು ಸಹ ಕಾಳಜಿ ಕೇಂದ್ರಗಳಲ್ಲಿ ಸ್ಥಳಾಂತರಿಸಲಾಗುವುದು ಎಂದ ಅವರು ಹಿಡಕಲ್ ಜಲಾಶಯದಿಂದ ಬುಧವಾರ 65 ಸಾವಿರ ಕ್ಯೂಸೆಕ್ಸ ನೀರನ್ನು ನದಿಗೆ ಹರಿ ಬಿಡಲಾಗಿದ್ದು, ನದಿ ತೀರದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಮನವಿ ಮಾಡಿದರು. ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಘಟಪ್ರಭಾ , ಹಿರಣ್ಯಕೇಶಿ, ಕೃಷ್ಣಾ ನದಿಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವ ಪರಿಣಾಮ ಜಿಲ್ಲೆಯ ಕೆಲವು ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ಅದನ್ನು ಸರ್ಮಥವಾಗಿ ನಿಭಾಯಿಸುತ್ತಿದ್ದಾರೆ. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲಾ ಎಂದು ಹೇಳಿದರು.
ಶೀಘ್ರ ಪರಿಹಾರ ವಿತರಣೆ : ಸತತ ಸುರಿಯುತ್ತಿರುವ ಮಳೆಯಿಂದ ನಗರದ ಸಂಗಮ ನಗರದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಫರಿದಾಬಾನು ಖನವಾಡ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಮತ್ತು ಅವರ ಇಬ್ಬರೂ ಮಕ್ಕಳಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರದಲ್ಲೇ ಮೃತರ ಕುಟುಂಬಕ್ಕೆ ಪರಿಹಾರ ವಿತರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಡಿ.ಸಿ.ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಲೋಳಸೂರ ಸೇತುವೆ ಮುಳುಗಡೆ ಸಂಚಾರ ಬಂದ್ : ನಗರದ ಹೊರ ವಲಯದಲ್ಲಿರುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆ ಪ್ರವಾಹದಿಂದ ಸಂಪೂರ್ಣ ಮುಳಗಡೆಯಾಗಿದ್ದು, ಸೇತುವೆ ಮೇಲೆ ಸಂಚಾರ ಬಂದ ಮಾಡಲಾಗಿದ್ದು, ಜನ ಸೇತುವೆ ಮೇಲೆ ತೆರಳದಂತೆ ನಿಗಾ ವಹಿಸಲು ಪೊಲೀಸ್ ಇಲಾಖೆಯಿಂದ ಬ್ಯಾರಿಗೇಟ್ ವ್ಯವಸ್ಥೆ ಮಾಡಲಾಗಿದೆ. ನಗರದ ಇನ್ನೊಂದು ಪ್ರಮುಖ ಚಿಕ್ಕೋಳಿ ಸೇತುವೆಯೂ ಸಹ ಮುಳುಗಡೆ ಸನಿಹದಲ್ಲಿದೆ.
ನಗರಕ್ಕೆ ನುಗ್ಗಿದ ನೀರು : ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಘಟಪ್ರಭಾ, ಹಿರಣ್ಯಕೇಶಿ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿರುವ ಪರಿಣಾಮ ಗೋಕಾಕ ನಗರಕ್ಕೆ ಪ್ರವಾಹ ಎದುರಾಗಿದ್ದು, ನಗರದ ಮಟನ್ ಮಾರ್ಕೆಟ್, ಹಳೆ ದನಗಳ ಪೇಠೆ, ದಾಳಂಬ್ರಿ ತೋಟ, ಬೋಜಗರ ಓಣಿ, ಉಪ್ಪಾರ ಓಣಿ, ಕುಂಬಾರ ಓಣಿ, ಕಿಲ್ಲಾ ಓಣಿ ಪ್ರದೇಶಗಳಲ್ಲಿ ನದಿ ನೀರು ನುಗ್ಗಿದ ಪರಿಣಾಮ ಈ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕ ಬಹುತೇಕ ಮನೆಗಳಲ್ಲಿ ನೀರು ನುಗ್ಗಿದೆ. ನಗರಸಭೆ ಅಧಿಕಾರಿಗಳು ಈ ಪ್ರದೇಶದಲ್ಲಿ ವಾಸವಾಗಿರುವ ಸಾರ್ವಜನಿಕರಿಗೆ ಕಾಳಜಿ ಕೇಂದ್ರಗಳಿಗೆ , ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಮೋಹನ ಭಸ್ಮೆ, ತಾಪಂ ಮುಖ್ಯಾಧಿಕಾರಿ ಪರಶುರಾಮ ಗಸ್ತೆ, ಸಿಪಿಐ ಸುರೇಶಬಾಬು, ಡಾ.ಮೋಹನ ಕಮತ್, ಬಿಇಒ ಜಿ.ಬಿ.ಬಳಗಾರ, ಪಿಎಸ್ಐ ಕಿರಣ ಮೋಹಿತೆ,ಡಾ.ಎಂ.ಎಸ್.ಕೊಪ್ಪದ, ಎ.ಬಿ.ಮಲಬನ್ನವರ, ಪೌರಾಯುಕ್ತ ರವಿ ರಂಗಸುಭೆ, ಎಂ.ಎಚ್.ಗಜಾಕೋಶ, ಜಯಶೆ ತಾಂಬೂಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



