ಗೋಕಾಕ:ಬೊಮ್ಮಾಯಿ ಸರಕಾರ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಬಿಡುಗಡೆಗೊಳಿಸಬೇಕು : ರಾಜ್ಯಾಧ್ಯಕ್ಷ ವಿನಾಯಕ ಕಟ್ಟಿಕರ ಒತ್ತಾಯ
ಬೊಮ್ಮಾಯಿ ಸರಕಾರ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಬಿಡುಗಡೆಗೊಳಿಸಬೇಕು : ರಾಜ್ಯಾಧ್ಯಕ್ಷ ವಿನಾಯಕ ಕಟ್ಟಿಕರ ಒತ್ತಾಯ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 18 :
ಬೊಮ್ಮಾಯಿ ಸರಕಾರ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಬಿಡುಗಡೆಗೊಳಿಸಬೇಕೆಂದು ಅಹಿಂದ ಚೇತನ ಸಂಘಟನೆಯ ರಾಜ್ಯಾಧ್ಯಕ್ಷ ವಿನಾಯಕ ಕಟ್ಟಿಕರ ಸರ್ಕಾರವನ್ನು ಒತ್ತಾಯಿಸಿದ್ದರು.
ಶನಿವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ರಾಜ್ಯದ ಜನಸಂಖ್ಯೆಯಲ್ಲಿ ಶೇ. 80%ರಷ್ಟಿರುವ ಅಲ್ಪಸಂಖ್ಯಾತ,ಹಿಂದುಳಿದ,ದಲಿತ ವರ್ಗಗಳಿಗೆ ನ್ಯಾಯ ಸಿಗುವಂತೆ ಮಾಡಬೇಕು. 2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು 180 ಕೋಟಿ ವ್ಯಯಿಸಿ ನಡೆಸಿದ್ದಾರೆ. ಸಮೀಕ್ಷೆ ನಡೆದು 5 ವರ್ಷಗಳಾಗುತ್ತಿದೆ . ಸಚಿವ ಸಂಪುಟದ ತೀರ್ಮಾನದಂತೆ ಜಾಹೀರಾತುಗಳನ್ನು ನೀಡಿ, ಜಾಗೃತಿ ಮೂಡಿಸಿ ರಾಜ್ಯಾದ್ಯಂತ ಮನೆ ಮನೆ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಿ, ಸಹಕಾರ ನೀಡಿ, ಆ ಸಮಯದಲ್ಲಿ ಆಯಾ ಜಾತಿ ಸಮುದಾಯಗಳು ಗಣತಿಯ ಬಗ್ಗೆ ಜಾಗೃತಿ ಮೂಡಿಸಿ ಜಾತಿಗಳ ಬಗ್ಗೆ ಮಾಹಿತಿಗಳನ್ನು ನೀಡಿಸಿರುತ್ತಾರೆ. ಆದರೆ ಸಮೀಕ್ಷೆ ನಡೆಸಿ 5 ವರ್ಷಗಳು ಕಳೆದರೂ ಇದುವರೆಗೂ ಅಂದಿನ ಸಿದ್ದರಾಮಯ್ಯ ಸೇರಿದಂತೆ ಯಾವ ಸರ್ಕಾರಗಳು ಬಿಡುಗಡೆ ಮಾಡುತ್ತಿಲ್ಲ, ಜಾತಿ ಗಣತಿ ಬಿಡುಗಡೆಗೊಳಿಸಬೇಕೆಂದು ಸರ್ಕಾರಗಳನ್ನು ಒತ್ತಾಯಿಸುವ ಸಮಯದಲ್ಲಿ ವರದಿಯನ್ನು ಬಿಡುಗಡೆ ಮಾಡಬಾರದೆಂದು ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅಥವಾ ಜಾತಿಗಣತಿಯ ಬಿಡುಗಡೆಗೊಳಿಸುವುದರಿಂದ ಜಾತಿಗಳ ಜನಸಂಖ್ಯೆ ಬಗ್ಗೆ ರಾಜ್ಯದ ಜನರು ತಿಳಿಯಬಹುದಾಗಿದೆ. ಅಹಿಂದ ವರ್ಗಗಳಿಗೆ ನ್ಯಾಯ ಸಿಗಬೇಕಾದರೆ, ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಸಮೀಕ್ಷೆಯನ್ನು ಸರ್ಕಾರವು ಅಂಗೀಕರಿಸಿ, ಸಾರ್ವಜನಿಕವಾಗಿ ಬಿಡುಗಡೆಗೊಳಿಸಬೇಕು.
ಜನಗಣತಿಯನ್ನು ಸಾರ್ವಜನಿಕರ ತೆರಿಗೆ ಹಣದಿಂದ ಸಮೀಕ್ಷೆ ಮಾಡಲಾಗಿದ್ದು . ಆ ಹಣ ವ್ಯರ್ಥವಾಗದಂತೆ, ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಿ, ಶೇ. 80% ರಷ್ಟು ಜನಸಂಖ್ಯೆಯನ್ನು ಹೊಂದಿರುವ ಅಹಿಂದ ವರ್ಗಗಳಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ನ್ಯಾಯ ಸಿಗುವಂತೆ ಮಾಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಹಿಂದ ಚೇತನ ಸಂಘಟನೆ ರಾಜ್ಯ ಸಂಚಾಲಕ ವಿಠಲ ಮುರ್ಕೀಬಾವಿ, ರಾಜ್ಯ ಸಂಚಾಲಕ ಮಾರುತಿ ಮೌರ್ಯ, ಹಿರಿಯ ವಕೀಲರಾದ ಎಸ್.ಎಂ ಹತ್ತಿಕಟ್ಟಗಿ, ಎಲ್.ಎಲ್.ಬೂದಿಗೋಪ್ಪ, ಯು.ಬಿ.ಸಿಂಪಿ, ಜಿ.ಎಸ್.ನಂದಿ, ಜಿ.ಆರ್.ಪೂಜೇರಿ, ಎಸ್.ವಾಯ್.ತಿಗಡಿ, ಎಂ.ವ್ಹಿ.ಕರಡಿಗುದ್ದಿ, ಕರುನಾಡು ಕುರಬರ ಪಡೆಯ ರಾಜ್ಯ ಉಪಾಧ್ಯಕ್ಷ ಶಿವಾನಂದ ಖಿಲಾರಿ, ಜಿಲ್ಲಾಧ್ಯಕ್ಷ ಅಲ್ಲಪ್ಪ ಗಣೇಶವಾಡಿ ಉಪಸ್ಥಿತರಿದ್ದರು.